ಮಂಗಳೂರು, ಮೇ 02 : ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ಪ್ರಧಾನಿ ಮೋದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ, ನರೇಂದ್ರ ಮೋದಿಯವರು, ನಾನು ಪ್ರಧಾನಿಯಾದ ಮೇಲೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸ್ತೀನಿ ಎಂದು ಹೇಳಿದ್ದು ಮರೆತಿರಬೇಕು. ಈಗ ಅದೇ ಮೋದಿಗೆ ಸಡನ್ ಆಗಿ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ವಿಪರೀತ ಪ್ರೀತಿ ಉಕ್ಕಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಪ್ರೀತಿಗೆ ಕಾರಣ ಒಳ ಒಪ್ಪಂದದ ಸಂಕೇತ ಇರಬಹುದು ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಮಾವೇಶದಲ್ಲಿ ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ, ರಾಜಕಾರಣದಲ್ಲಿ ಭಿನ್ನಮತ ಸಾಮಾನ್ಯ. ದೇವೇ ಗೌಡರು ನಮ್ಮ ದೇಶದ ಹಿಂದಿನ ಪ್ರಧಾನಿ. ದೇವೇಗೌಡರು ಈ ದೇಶದ ಹಿರಿಯರು. ಆದರೆ ಕಾಂಗ್ರೆಸ್ನವರು ದೇವೇಗೌಡರನ್ನು ಅವಮಾನಿದ್ದಾರೆ. ಇಂಥ ಕಾಂಗ್ರೆಸ್ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು. ಸಂಸತ್ತಿನಲ್ಲಿ ಅವರು ನನ್ನ ವಿರುದ್ಧ ಮಾತನಾಡುತ್ತಾರೆ, ನಮ್ಮ ವಿರುದ್ಧ ಮತ ಹಾಕುತ್ತಾರೆ, ರಾಜಕಾರಣದಲ್ಲಿ ವಿರೋಧಿಗಳು ನಾವು ಹಾಗೆಂದ ಮಾತ್ರಕ್ಕೆ ಅಗೌರವ ಸಲ್ಲಿಸಬಾರದು ಎಂದು ಮೋದಿ ಹೇಳಿದ್ದರು.