ಕಾವ್ರಾಡಿ, ಆ. 28 (DaijiworldNews/MB) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿದ್ದು ‘ನಮ್ಮೂರು-ನಮ್ಮ ಕೆರೆ’ ಕಾರ್ಯಕ್ರಮದಡಿ ಈ ತನಕ 208 ಕೆರೆಗಳ ಅಭಿವೃದ್ದಿಗೊಳಿಸಲಾಗಿದೆ. ಇದಕ್ಕಾಗಿ 16.5 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ‘ನಮ್ಮೂರು-ನಮ್ಮ ಕೆರೆ’ಯೋಜನೆಗೆ ಅನುದಾನ ಧ.ಗ್ರಾ.ಯೋಜನೆ ಒದಗಿಸುತ್ತಿದ್ದರೂ ಸ್ಥಳೀಯರ ಸಹಕಾರವೂ ಅಷ್ಟೇ ಮುಖ್ಯವಾಗಿರುತ್ತದೆ. ಕೆರೆಗಳ ಹೂಳೆತ್ತುವಿಕೆಯ ವ್ಯವಸ್ಥೆಯನ್ನು ಸ್ಥಳೀಯರು ಮಾಡಬೇಕು. ಇದರಿಂದ ನಮ್ಮ ಕೆರೆ ಎಂಬ ಅಭಿಮಾನವೂ ಹೆಚ್ಚುತ್ತದೆ ಎಂದು ಕರಾವಳಿ ಪ್ರಾದೇಶೀಕ ಕಚೇರಿ ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಹೇಳಿದರು.









ಶ್ರೀ ಕ್ಷೇ.ಧ.ಗ್ರಾ.ಯೋಜನೆ ರಿ., ಧರ್ಮಸ್ಥಳ ಇವರ ಆರ್ಥಿಕ ಸಹಕಾರದೊಂದಿಗೆ, ಗ್ರಾಮ ಪಂಚಾಯತ್ ಕಾವ್ರಾಡಿ, ಬಾಗಳ ಕೆರೆ ಅಭಿವೃದ್ದಿ ಸಮಿತಿ ಕಾವ್ರಾಡಿ ಇವರ ಸಹಭಾಗಿತ್ವದಲ್ಲಿ ''ನಮ್ಮೂರು-ನಮ್ಮ ಕೆರೆ'' ಕಾರ್ಯಕ್ರಮದಡಿ ಅಭಿವೃದ್ದಿಗೊಂಡ 175ನೇ ಬಾಗಳಕೆರೆಗೆ ಬಾಗಿನ ಸಮರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೆರೆಗಳ ಅಭಿವೃದ್ದಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವೆನ್ನುವುದು ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಸ್ಥಳೀಯರು ಇಂತಹ ಯೋಜನೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡಾಗ ಅದು ಯಶಸ್ವಿಯಾಗುತ್ತದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲ ಕಾಣಿಸಿಕೊಂಡಾಗ ಕೆರೆ ಅಭಿವೃದ್ದಿ ಯೋಜನೆಯ ಮೂಲಕ ಕೆರೆಗಳ ಪುನಶ್ಚೇತನ ಮಾಡಲಾಯಿತು. ಅದು ನಿರಂತರಗೊಂಡು ಇವತ್ತು ರಾಜ್ಯ ಸರ್ಕಾರ ಕೂಡಾ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ಗ್ರಾಮಾಭಿವೃದ್ದಿ ಯೋಜನೆಗೆ ವಹಿಸುತ್ತಿದೆ. ''ಕೆರೆ ಸಂಜೀವಿನಿ'' ಸರ್ಕಾರದ ಕಾರ್ಯಕ್ರಮವಾಗಿದ್ದು, ಈಗಾಗಲೇ 50 ಕೆರೆಗಳನ್ನು ಹೂಳೆತ್ತಲಾಗಿದೆ ಎಂದರು.
ಕೆರೆಯನ್ನು ಪಂಚಾಯತಿಗೆ ಹಸ್ತಾಂತರಿಸಿ ಮಾತನಾಡಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ ಜನರಲ್ಲಿ ಇದು ನಮ್ಮ ಕೆರೆ ಎನ್ನುವ ಭಾವನೆ ಮೂಡಬೇಕು. ನಮ್ಮೂರು-ನಮ್ಮ ಕೆರೆ ಎನ್ನುವ ಹೆಸರಿನಂತೆ ಪ್ರತಿಯೊಬ್ಬರು ಇದು ನಮ್ಮ ಕೆರೆ ಎಂಬ ಅಭಿಮಾನದಿಂದ ನೋಡಿಕೊಂಡಾಗ ಯೋಜನೆಯ ಆಶಯ ಈಡೇರುತ್ತದೆ. ಕೆರೆಗಳ ಪುನನಿರ್ಮಾಣದಿಂದ ಬಾವಿ, ಬೋರ್ವೆಲ್ಗಳ ಅಂತರ್ಜಲದ ಮಟ್ಟವೂ ಏರುತ್ತದೆ. ಕೃಷಿಗೆ ಪೂರಕವಾಗುತ್ತದೆ. ಬಾಗಳಕೆರೆ ಈ ಭಾಗದ ಎಲ್ಲರಿಗೂ ಪ್ರಯೋಜನಕ್ಕೆ ಬರಲಿ ಎಂದರು.
ಕೆರೆ ಅಭಿವೃದ್ದಿ ಸಮಿತಿಯ ಸಲಹೆಗಾರರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ.ಆಡಳಿತಾಧಿಕಾರಿ ಸುಮಲತಾ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಮುರಳೀಧರ ಕೆ.ಶೆಟ್ಟಿ, ಕಾವ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಗೌರಿ ಆರ್.ಶ್ರೀಯಾನ್, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ನವೀನ್ಚಂದ್ರ ಶೆಟ್ಟಿ, ಕೆರೆ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ದಿನಕರ ಆಚಾರ್ಯ ಕಂಡ್ಲೂರು, ಸೇವಾ ಪ್ರತಿನಿಧಿಗಳಾದ ಸುಜಾತ ಜಿ., ಸುಜಾತ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಲಯ ಮೇಲ್ವಿಚಾರಕಿ ಸುಜಾತ ಶೆಟ್ಟಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಪ್ರೇಮಲತಾ ವಂದಿಸಿದರು.