ಕಾಸರಗೋಡು, ಆ 28(DaijiworldNews/HR): ಕೇರಳ-ಕರ್ನಾಟಕ ಅಂತಾರಾಜ್ಯ ಪ್ರಮುಖ ನಾಲ್ಕು ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದ್ದು, ಹೈಕೋರ್ಟ್ ನ ಮಧ್ಯಂತರ ಆದೇಶವಿದ್ದರೂ ಜಾಲ್ಸೂರು ರಸ್ತೆಯನ್ನು ತೆರೆದಿಲ್ಲ ಎಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದೀಗ ಪೊಲೀಸರು ಜಾಲ್ಸೂರು ರಸ್ತೆಯನ್ನು ತೆರೆದಿದ್ದಾರೆ.

ಜಿಲ್ಲೆಯಿಂದ ಕರ್ನಾಟಕಕ್ಕೆ ದೈನಂದಿನ ಸಂಚಾರಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಮಹತ್ವದ ಆದೇಶ ನೀಡಿದ್ದರು. ಹಾಗೆಯೇ ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ಆಂಟಿಜನ್ ತಪಾಸಣೆ ನಡೆಸಿ ಕೋವಿಡ್-19 ಪೋರ್ಟಲ್ ನಲ್ಲಿ ನೋಂದಾಯಿಸಬೇಕು . ಈ ರಸ್ತೆ ಮೂಲಕ ತೆರಳುವವರಿಗೆ ಆಂಟಿಜನ್ ತಪಾಸಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದರು.
ಕರ್ನಾಟಕ ಪ್ರಯಾಣಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕೇಂದ್ರ ಸರಕಾರದ ಮಾನದಂಡದಂತೆ ಗಡಿ ಬಂದ್ ಮಾಡುವಂತಿಲ್ಲ. ಗಡಿಯಲ್ಲಿ ಯಾವುದೇ ನಿರ್ಬಂಧ ಸಾಧ್ಯ ಇಲ್ಲ ಎಂದು ಹೇಳಿತ್ತು. ದೈನಂದಿನ ಪಾಸ್ ರದ್ದುಗೊಳಿಸಿದ್ದರೂ ಪ್ರಯಾಣಿಕರ ಸಮಸ್ಯೆ ಮುಗಿಯುವುದಿಲ್ಲ. ಮಾನದಂಡದಲ್ಲಿ ಬದಲಾವಣೆ ಇಲ್ಲ. ಇದು ಜನರನ್ನು ಮೂರ್ಖರನ್ನಾಗಿಸುವ ತಂತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಹೇಳಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ ಮತ್ತು ಸಾರಡ್ಕ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ ಆದರೆ ಜಾಲ್ಸೂರು ರಸ್ತೆಯನ್ನು ಜಿಲ್ಲಾಡಳಿತ ಬಂದ್ ಮಾಡಿದ್ದು ಶ್ರೀಕಾಂತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಇದೀಗ ಹೈಕೋರ್ಟ್ ನ ಮಧ್ಯಂತರ ಆದೇಶವಿದ್ದರೂ ಜಾಲ್ಸೂರು ರಸ್ತೆಯನ್ನು ತೆರೆದಿಲ್ಲ ಎಂದು ಬಿಜೆಪಿಯು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಪೊಲೀಸರು ಜಾಲ್ಸೂರು ರಸ್ತೆಯನ್ನು ತೆರೆದಿದ್ದಾರೆ.