ಮಂಗಳೂರು, ಆ 28 (DaijiworldNews/PY): ತುಳು ಭಾಷೆಯ ಮಾನ್ಯತೆಗಾಗಿ ಬಹಳ ಸಮಯದಿಂದ ಕೆಲವು ಸಂಸ್ಥೆಗಳು ವಿವಿಧ ಅಭಿಯಾನಗಳನ್ನು ನಡೆಸುವ ಮೂಲಕ ತಮ್ಮ ಪ್ರಯತ್ನಗಳನ್ನು ಮಾಡುತ್ತಿವೆ. ಇದಕ್ಕಾಗಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಸಂಘಟನೆಗಳನ್ನು ತಮ್ಮ ಟ್ವೀಟ್ ಮೂಲಕ ತುಳು ಭಾಷೆಗೆ ಬೆಂಬಲವನ್ನು ನೀಡುತ್ತಿದ್ದು, ಅಲ್ಲದೇ, ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸಿದ್ದಾರೆ.

ಇದರೊಂದಿಗೆ ಜೈ ತುಳುನಾಡ್ ಎನ್ನುವ ಸಂಸ್ಥೆಯೂ ಕೂಡಾ ತನ್ನ ವಿಶಿಷ್ಟ ಕಾರ್ಯಕ್ರಮದ ಮೂಲಕ ತುಳು ಭಾಷೆಯನ್ನು ಉತ್ತೇಜಿಸುವಲ್ಲಿ ಈ ಸಂಸ್ಥೆಯೂ ಕೂಡಾ ಅಭಿಯಾನ ಕೈಗೊಳ್ಳಲು ಮುಂದಾಗಿದೆ.
ತುಳು ಭಾಷೆಯ ಉತ್ತೇಜನಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟ ಜೈ ತುಳುನಾಡ್ ಸಂಸ್ಥೆಯು, ಜನರಿಗೆ ತುಳು ಭಾಷೆಯನ್ನುಆನ್ಲೈನ್ ಮೂಲಕ ಉಚಿತವಾಗಿ ಕಲಿಸುತ್ತಿದೆ. ಕೊರೊನಾ ಲಾಕ್ಡೌನ್ನ ನಡುವೆ ಮೂರು ತಿಂಗಳಿನಿಂದ ಭಾಷೆ ಕಲಿಯಲು ಉತ್ಸುಕರಾಗಿರುವ ಜನರಿಗೆ ಜೈ ತುಳುನಾಡ್ ಸಕ್ರಿಯವಾದ ತರಬೇತಿ ನೀಡುತ್ತಿದೆ.
ದಾಯ್ಜಿವಲ್ಡ್ನೊಂದಿಗೆ ಮಾತನಾಡಿದ ಜೈ ತುಳುನಾಡ್ ಅಧ್ಯಕ್ಷ ಸುದರ್ಶನ್ ಅವರು, ನಾವು ಕಳೆದ ಮೂರು ವರ್ಷಗಳಿಂದ ಶಾಲೆಗಳಲ್ಲಿ ತುಳುಲಿಪಿಗಳನ್ನು ಉಚಿತವಾಗಿ ಕಲಿಸುತ್ತಿದ್ದೇವೆ. ಕೊರೊನಾ ಕಾರಣದಿಂದ ನಾವು ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದೇವೆ. ಇದು ನಮಗೆ ಆನ್ಲೈನ್ ಮೂಲಕ ತುಳುಲಿಪಿಯನ್ನು ಕಲಿಸುವಂತ ಆಲೋಚನೆ ನೀಡಿತು. ಈ ನಡುವೆ ಹಲವಾರು ಮಂದಿ ತುಳು ಭಾಷೆಯನ್ನು ಕಲಿಯು ಆಸಕ್ತಿ ವ್ಯಕ್ತಪಡಿಸಿದರು. ಆದರೆ, ಕೆಲವರಿಗೆ ನಾವು ಮಾಡುವ ಆನ್ಲೈನ್ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಬಳಿಕ ನಾವು ವಾಟ್ಸಾಪ್ ಗ್ರೂಪ್ ಮೂಲಕ ಜನರಿಗೆ ತುಳು ಭಾಷೆಯನ್ನು ಕಲಿಸುವ ಕಾರ್ಯವನ್ನು ಕೈಗೊಂಡೆವು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ನಾವು ಮೂರು ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿದ್ದು, ಇದರಲ್ಲಿ ಕೇವಲ ಒಂದು ಗಂಟೆ ಮಾತ್ರವೇ ನಾವು ಕಲಿಸುತ್ತಿದ್ದೆವು. ಪ್ರತೀ ವಾಟ್ಸಾಪ್ ಗ್ರೂಪ್ನಲ್ಲಿ ಮೂರು ಶಿಕ್ಷಕರಿದ್ದಾರೆ. ಅಲ್ಲದೇ, ಜನರಿಂದ ನಮಗೆ ಉತ್ತಮವಾದ ಪ್ರತಿಕ್ರಿಯೆ ದೊರೆತಿದ್ದು, ಇದರಿಂದ ನಾವು ಆನ್ಲೈನ್ ತರಗತಿಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲು ಪ್ರಾರಂಭ ಮಾಡಿದೆವು. ಬೆಂಗಳೂರು ಸೇರಿದಂತೆ ಮುಂಬೈನಂತಹ ಇತರ ನಗರಗಳ ಜನರು ಕೂಡಾ ತುಳು ಲಿಪಿ ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು. ಪ್ರಸ್ತುತ ನಮ್ಮಲ್ಲಿ 53 ವಾಟ್ಸಾಪ್ ಗ್ರೂಪ್ಗಳಿವೆ. ಇದರಲ್ಲಿ 34 ಗ್ರೂಪ್ಗಳು ಪುರುಷರಿಗಾದರೆ, 18 ಗ್ರೂಪ್ಗಳು ಮಹಿಳಾ ವಿದ್ಯಾರ್ಥಿಗಳಿಗೆ. ಇನ್ನು ಮಹಿಳಾ ವಿದ್ಯಾರ್ಥಿಗಳಿಗೆ ಮಹಿಳಾ ಶಿಕ್ಷಕಿಯರು ಕಲಿಸಲು ನಿಯೋಜಿಸಿದರೆ, ಪುರುಷರಿಗೆ ಪುರುಷ ಶಿಕ್ಷಕರು ಕಲಿಸಲು ನಿಯೋಜಿಸಲಾಗಿದೆ. ತುಳು ಲಿಪಿ ಕಲಿಸಲು ಸುಮಾರು 50 ಶಿಕ್ಷಕರಿದ್ದಾರೆ. ಹಾಗೆಯೇ ಸುಮಾರು 1,500 ವಿದ್ಯಾರ್ಥಿಗಳು ತುಳು ಲಿಪಿ ಕಲಿಯುತ್ತಿದ್ದು, 5 ರಿಂದ 70 ವರ್ಷ ವಯಸ್ಸಿನವರು ಈ ಗುಂಪಿನಲ್ಲಿದ್ದಾರೆ ಎಂದಿದ್ದಾರೆ.
ವಾಟ್ಸಾಪ್ ಗ್ರೂಪ್ ಮೂಲಕ ಜನರಿಗೆ ಕಲಿಸುವುದು ಸುಲಭ. ಹೇಗೆಂದರೆ, ಶಿಕ್ಷಕರು ತುಳು ಲಿಪಿಗೆ ಸಂಬಂಧಿಸಿದಂತ ಗ್ರಾಫಿಕ್ಸ್ನೊಂದಿಗೆ ವಾಯ್ಸ್ ನೋಟ್ ಹಾಗೂ ವಿಡಿಯೋವನ್ನು ಕಳುಹಿಸುತ್ತಾರೆ. ಆ ದಿನ ಕಲಿತದ್ದನ್ನು ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್ಗೆ ಕಳಿಸುತ್ತಾರೆ. ಈ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಶಿಕ್ಷಕರು ವೈಯುಕ್ತಿಕವಾಗಿ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸುತ್ತಾರೆ ಎಂದು ತಿಳಿಸಿದ್ದಾರೆ.
ವಾಟ್ಸಾಪ್ ಗ್ರೂಪ್ನಲ್ಲಿ ಮುಂಬೈ ತುಳುವರು ಹಾಗೂ ಕಾಸರಗೋಡು ತುಳುವರು ಎನ್ನುವ ಪ್ರತ್ಯೇಕವಾದ ಗ್ರೂಪ್ಗಳಿವೆ. ಮುಂಬೈನಲ್ಲಿ ನೆಲೆಸಿರುವ ತುಳುವರಿಗೆ ಕನ್ನಡ ವರ್ಣಮಾಲೆಗಳ ಬಗ್ಗೆ ತಿಳಿದಿಲ್ಲದ ಕಾರಣ ಅವರಿಗೆ ಹಿಂದಿ ವರ್ಣಮಾಲೆಯ ಸಹಾಯದಿಂದ ಕಲಿಸಲಾಗುತ್ತದೆ. ಇನ್ನು ಕಾಸರಗೋಡು ತುಳುವರು ಮಲಯಾಳಂ ವರ್ಣಮಾಲೆಗಳ ಸಹಾಯದಿಂದ ಕಲಿಯುತ್ತಾರೆ ಎಂದು ಹೇಳಿದ್ದಾರೆ.
ನಾವು ತುಳು ಲಿಪಿ ಕಲಿಸುವುದರ ಜೊತೆಗೆ ತುಳು ಭಾಷೆಯನ್ನು ಕಲಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ತುಳು ಲಿಪಿಯನ್ನು ಕಲಿಸಲು ಪ್ರಾರಂಭಿಸಿದ ನಂತರ, ವಿವಧ ರಾಜ್ಯಗಳ ಹಾಗೂ ಜಿಲ್ಲೆಗಳ ಜನರು ತುಳು ಭಾಷೆಯನ್ನು ಕಲಿಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ನಾವು ತುಳು ಭಾಷೆಯನ್ನು ಕಲಿಸಲು ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಪ್ರಸ್ತುತ ಈ ಆನ್ಲೈನ್ ತರಗತಿಯಲ್ಲಿ 50ಕ್ಕೂ ಅಧಿಕ ಮಂದಿ ತುಳು ಭಾಷೆ ಕಲಿಯುತ್ತಿದ್ದಾರೆ. ಅಲ್ಲದೇ, ಮಣಿಪಾಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಾಗಾಲ್ಯಾಂಡ್ನ ಯುವತಿ ತುಳು ಭಾಷೆ ಕಲಿಯಲು ಆಸಕ್ತಿ ತೋರಿಸಿದ್ದಾಳೆ ಎಂದು ಹೇಳಿದ್ದಾರೆ.
ತುಳು ಶಿಕ್ಷಣವನ್ನು ಕೇಂದ್ರಿಕರಿಸುವ ಸಲುವಾಗಿ ನಾವು ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಅಭಿಯಾನವನ್ನು ಮಾಡಿದ್ದೇವು. ಇದರಿಂದ ನಮಗೆ ಹಲವಾರು ನಟರಿಂದ ಬೆಂಬಲವನ್ನು ದೊರಕಿದೆ. ಸರ್ಕಾರಕ್ಕೆ ನಮ್ಮದೊಂದು ಮನವಿಯೆಂದರೆ, ನಮಗೆ ಹಣ ಒದಗಿಸಿ, ಇದರಿಂದ ನಮಗೆ ಶಿಕ್ಷಕರಿಗೆ ಹಣ ನೀಡಲು ಸಹಾಯವಾಗುತ್ತದೆ ಎಂದು ಕೋರಿದ್ದಾರೆ.