ಮಂಗಳೂರು, ಆ 28 (DaijiworldNews/PY): ಪ್ರಾಥಮಿಕ ಶಿಕ್ಷಣವನ್ನು ತುಳು ಭಾಷೆಯಲ್ಲೇ ನೀಡಬೇಕು ಎನ್ನುವ ವಾದಕ್ಕೆ ತುಳುನಾಡಿನ ರಾಜಕಾರಣಿಗಳ ಬೆಂಬಲ ದೊರಕಿದ್ದು, ಈ ಬಗ್ಗೆ ಶುಕ್ರವಾರ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಮನವಿ ಸಲ್ಲಿಸಿದ್ದು, ಕೇಂದ್ರದ ಹೊಸ ಶಿಕ್ಷಣ ರೀತಿಯ ಪ್ರಕಾರ, ಪ್ರಾಥಮಿಕ ಶಿಕ್ಷಣವನ್ನು ತುಳು ಭಾಷೆಯಲ್ಲಿ ನೀಡಬೇಕೆಂದು ಕೋರಿದ್ದಾರೆ.

ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು, ಕೇಂದ್ರದ ಹೊಸ ಶಿಕ್ಷಣ ರೀತಿಯ ಪ್ರಕಾರ, ಪ್ರಾಥಮಿಕ ಶಿಕ್ಷಣವನ್ನು ತುಳು ಭಾಷೆಯಲ್ಲಿ ನೀಡಬೇಕೆಂದು ತುಳು ಭಾಷೆಯಲ್ಲಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ತುಳು ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎನ್ನುವ ನಿಟ್ಟಿನಲ್ಲಿ ಇತ್ತೀಚೆಗೆ ಜೈ ತುಳುನಾಡ್ ಸೇರಿದಂತೆ ಹಲವಾರು ತುಳು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೇ, ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಹೋರಾಟ ನಡೆಸಿದ್ದರು. ಇದರೊಂದಿಗೆ ತುಳು ಭಾಷೆಯ ಉತ್ತೇಜನಕ್ಕಾಗಿ ಟ್ವಿಟ್ಟರ್ ಅಭಿಯಾನವನ್ನು ಕೂಡಾ ಮಾಡಿದ್ದರು. ಪ್ರಸ್ತುತ ರಾಜಕಾರಣಿಗಳು ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.