ಉಡುಪಿ, ಆ. 28, (DaijiworldNews/SM): ದುಬಾರಿ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಮೂರುವರೆ ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ನಡೆದಿದೆ. ಪಡುಬಿದ್ರೆ ನಡ್ಸಾಲ್ ಗ್ರಾಮದ 53 ವರ್ಷದ ವ್ಯಕ್ತಿ ಮೋಸ ಹೋದವರಾಗಿದ್ದಾರೆ.

ಮುಲ್ಕಿಯ ಪ್ರಾರ್ಥನಾಲಯಕ್ಕೆ ಸಂಬಂಧಿಸಿದ ಕಂಪೆನಿಯಲ್ಲಿ ಅವರು ಕೆಲಸಕ್ಕಿದ್ದು, ಫೇಸ್ ಬುಕ್ ಬಳಸುತ್ತಿದ್ದರು. ಅವರಿಗೆ ಆಗಸ್ಟ್ 24ರಂದು ಫೇಸ್ ಬುಕ್ ನಲ್ಲಿ ಜೊನ್ ಶರ್ರಿ ಮಾಕ್ಸ್ ವೆಲ್ ಎಂಬ ಹೆಂಗಸು ಪರಿಚಯವಾಗಿ ನಂಬಿಸಿ ತಾನು ತನ್ನ ಹುಟ್ಟು ಹಬ್ಬಕ್ಕೆ ಬೆಲೆ ಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದಳು.
ಅದರಂತೆ ದೆಹಲಿ ಏರ್ ಪೋರ್ಟ್ ನಿಂದ ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಪಾರ್ಸೆಲ್ ಬಂದಿದೆ, ಅದನ್ನು ಕಳುಹಿಸಬೇಕಾದರೆ 58,000 ರೂಪಾಯಿ ಪಾವತಿಸಬೇಕಾಗಿ ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ್ದರು. ಅದನ್ನು ನಂಬಿದ ಪಿರ್ಯಾದಿದಾರರು ಆ ಖಾತೆಗೆ ಆ ಹಣವನ್ನು ವರ್ಗಾಯಿಸಿದ್ದರು.
ನಂತರ ಯಾರೋ ಹೆಂಗಸು ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಹೇಳಿ ಆದಾಯ ತೆರಿಗೆ ಕ್ಲಿಯರೆನ್ಸ್ ಬಗ್ಗೆ ಹಣ ಕಟ್ಟಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ 2,95,000 ರೂಪಾಯಿ ಹಣವನ್ನು ವರ್ಗಾಯಿಸಿದ್ದು, ಪಿರ್ಯಾದಿದಾರರಿಂದ ಒಟ್ಟು 3,53,000 ರೂಪಾಯಿ ಹಣವನ್ನು ವಂಚನೆಯಿಂದ ಬ್ಯಾಂಕ್ ಮೂಲಕ ಪಡೆದು, ಪಾರ್ಸೆಲ್ ಕಳುಹಿಸದೇ, ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.