ಕಾಸರಗೋಡು, ಆ 29(DaijiworldNews/HR): ಠೇವಣಿದಾರರಿಂದ ಹಣ ಪಡೆದು ವಂಚನೆ ನಡೆಸಿರುವುದಾಗಿ ಲಭಿಸಿದ ದೂರಿನಂತೆ ಮಂಜೇಶ್ವರ ಶಾಸಕ ಎಂ. ಸಿ ಖಮರುದ್ದೀನ್ ವಿರುದ್ಧ ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂ . ಸಿ ಖಮರುದ್ದೀನ್ ಚೆರ್ವತ್ತೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಫ್ಯಾಶನ್ಗೋಲ್ಡ್ ಜುವೆಲ್ಲರಿ ಅಧ್ಯಕ್ಷರಾಗಿದ್ದು, ಜುವೆಲ್ಲರಿಗೆ ಠೇವಣಿ ಇರಿಸಿದ ಆರಿಫ್, ಅಬ್ದುಲ್ ಶುಕೂರ್ ಹಾಗೂ ಝುಹರಾ ಎಂಬವರು ನೀಡಿದ ದೂರಿನಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಜ್ಯೂವೆಲ್ಲರಿಯ ಮ್ಯಾನೇಜಿಂಗ್ ಡೈರಕ್ಟರ್ ಟಿ.ಕೆ ಪೂಕಾಯ ತಂಘಳ್ ವಿರುದ್ದವೂ ಕೇಸು ದಾಖಲಿಸಲಾಗಿದೆ. ಮೂವರಿಂದ ಸುಮಾರು 36 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪಯ್ಯನ್ನೂರು, ಚೆರ್ವತ್ತೂರು ಹಾಗೂ ಕಾಸರಗೋಡಿನಲ್ಲಿರುವ ಮೂರು ಶಾಖೆಗಳನ್ನು ಜನವರಿಯಲ್ಲಿ ಮುಚ್ಚಲಾಗಿತ್ತು. 800 ಮಂದಿಯಷ್ಟು ಹೂಡಿಕೆದಾರರಿರುವ ಸಂಸ್ಥೆಯ ಸೊತ್ತನ್ನುಆಡಳಿತ ಸಮಿತಿಯ ಹೆಸರಿಗೆ ವರ್ಗಾಹಿಸಿ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಿಂದ ಠೇವಣಿ ದಾರರಿಗೆ ಲಾಭದ ಮೊತ್ತ ನೀಡಿಲ್ಲ ಇದರಿಂದ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಡಂಕೋಡ್ ನ ಅಬ್ದುಲ್ ಶುಕೂರ್ 30 ಲಕ್ಷ ರೂ. ಝುಹರಾ 15 ಪವನ್ ಹಾಗೂ ಒಂದು ಲಕ್ಷ ರೂ., ವಳಿಯಪರಂಬದ ಇ.ಕೆ ಆರಿಫ್ ಮೂರು ಲಕ್ಷ ರೂ.ವನ್ನು ಹೂಡಿದ್ದರೆನ್ನಲಾಗಿದೆ. ಇನ್ನಷ್ಟು ಠೇವಣಿ ದಾರರಿಂದ ದೂರುಗಳು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.