ಬೆಳ್ತಂಗಡಿ, ಮೇ 2: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಈ ಮಧ್ಯೆ 2013 ರ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಂಜನ್ ಜಿ. ಗೌಡ ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಂಜನ್ ಜಿ. ಗೌಡ ಮತ್ತು ಅವರ ತಂದೆ, ಮಾಜಿ ಸಚಿವ ಗಂಗಾಧರ ಗೌಡ ಕಳೆದ 4 ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ಯುವಕರನ್ನು ಸಂಘಟಿಸಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದರು. ಆದರೆ ಈ ಬಾರಿ ರಂಜನ್ ಜಿ. ಗೌಡ ಅವರಿಗೆ ಟಿಕೆಟ್ ನೀಡದೆ ಯುವ ಮೋರ್ಚಾ ಮುಖಂಡ ನ್ಯಾಯವಾದಿ ಹರೀಶ್ ಪೂಂಜಾ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಬಿಜೆಪಿ ಪಕ್ಷದ ಈ ನಿರ್ಧಾರದಿಂದ ರಂಜನ್ ಗೌಡ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ಮೌನವಾಗಿದ್ದ ರಂಜನ್ ಗೌಡ ಪಕ್ಷ ಬದಲಿಸಿ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಡಿ.ಕೆ. ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಡಿಕೆಶಿ ಸಾರಥ್ಯದಲ್ಲಿ ರಂಜನ್ ಗೌಡ ಮತ್ತು ಗಂಗಾಧರ ಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.