ಮಂಗಳೂರು, ಆ. 29 (DaijiworldNews/MB) : ನಗರದಲ್ಲಿ ನಡೆದ ಗೋಲಿಬಾರ್ಗೆ ಸಂಬಂಧಿಸಿ ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ತನಿಖೆಯ ಅಂತಿಮ ವಿಚಾರಣೆ ಸೆ.1 ರಂದು ನಡೆಯಲಿದೆ.

ಕಳೆದ ವರ್ಷ ಡಿಸೆಂಬರ್ 19 ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದರು. ಗುಂಡಿನ ದಾಳಿಯಿಂದಾಗಿ ಇಬ್ಬರು ಪ್ರತಿಭಟನಾಕಾರರಾದ ನೌಶೀನ್ ಹಾಗೂ ಜಲೀಲ್ ಕುದ್ರೋಳಿ ಮೃತಪಟ್ಟಿದ್ದರು. ಬಳಿಕ ಸರ್ಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿತ್ತು.
ಈ ಘಟನೆಗೆ ಸಂಬಂಧಿಸಿ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಲು ಅಂತಿಮ ಅವಕಾಶವನ್ನು ನೀಡಲಾಗಿದ್ದು ಮಿನಿ ವಿಧಾನ ಸೌಧದಲ್ಲಿ ಇರುವ ಮಂಗಳೂರು ಸಹಾಯಕ ಆಯುಕ್ತರ ಸಭಾಂಗಣಕ್ಕೆ ಬರಬೇಕು ಎಂದು ಜಗದೀಶ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಬೆಳಿಗ್ಗೆ 11 ಮತ್ತು ಮಧ್ಯಾಹ್ನ 1 ಗಂಟೆಗೆಯವರೆಗೆ ಹೇಳಿಕೆ ನೀಡಲು ಅಂತಿಮ ಅವಕಾಶ ನೀಡಲಾಗಿದೆ. ಆ ಬಳಿಕ ಯಾವುದೇ ಸಾಕ್ಷಿ, ಹೇಳಿಕೆಯನ್ನು ಸ್ವೀಕಾರ ಮಾಡಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.