ಬಂಟ್ವಾಳ,ಮೇ 02: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ಕ್ಷೇತ್ರದ ಹಾಲಿ ಶಾಸಕ ಹಾಗೂ ಅಭ್ಯರ್ಥಿ ರಮಾನಾಥ ರೈ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿರುವುದರ ಹಿಂದೆ ಬೈಂದೂರು ಬಿಜೆಪಿ ಕ್ಷೇತ್ರ ಅಭ್ಯರ್ಥಿ ಸುಕುಮಾರ ಶೆಟ್ಟಿ ಅವರ ಕೈವಾಡವಿದೆ ಎನ್ನುವ ಆರೋಪವನ್ನು ರಮಾನಾಥ ರೈ ಮಾಡಿದ್ದಾರೆ.
ಈ ಎರಡು ಶಾಲೆಗಳಿಗೆ ದೇವಸ್ಥಾನದಿಂದ ನೀಡಲಾಗುತ್ತಿದ್ದ ಬಿಸಿಯೂಟದ ಅನುದಾನವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕೃತ್ಯದ ಹಿಂದೆ ಸಚಿವ ರಮಾನಾಥ ರೈ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿಗರು ಮಾಡಿದ್ದು, ಬಹಳಷ್ಟು ವಿವಾದಕ್ಕೆ ಕಾರಣವಾಗಿತ್ತು. ಹಲವು ಕಡೆಗಳಲ್ಲಿ ಈ ಬಗ್ಗೆ ಪ್ರತಿಭಟನೆಯನ್ನೂ ಮಾಡಲಾಗಿತ್ತು. ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದ ರಮಾನಾಥ ರೈ ಸುಕುಮಾರ ಶೆಟ್ಟಿ ಅವರು ಈ ಅನುದಾನವನ್ನು ಸ್ಥಗಿತಗೊಳಿಸಿ ಎಂದು ನನ್ನಲ್ಲಿ ಹೇಳಿದ್ದರಿಂದ ದೇಗುಲದಿಂದ ನೀಡಲಾಗುತ್ತಿದ್ದ 4.5 ಲಕ್ಷ ರೂ. ಅನುದಾನವನ್ನು ಸ್ಥಗಿತಗೊಳಿಸಲಾಯಿತು ಎಂದು ರೈ ಹೇಳಿದ್ದಾರೆಂದು ತಿಳಿದು ಬಂದಿದೆ.