ಮಂಗಳೂರು, ಆ. 29 (DaijiworldNews/MB) : ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ, ಬಿಎ, ಬಿಎಸ್ಸಿ, ಎಂಎ, ಎಂಎಸ್ಸಿ, ಬಿಇಡಿ ಮತ್ತು ಡಿಇಡಿ ಪೂರ್ಣಗೊಳಿಸಿದ ಉಪನ್ಯಾಸಕರು ಈಗ ಉಪನ್ಯಾಸಕ ಕೆಲಸ ದೊರೆಯದೆ ಕಾರ್ಮಿಕರಾಗಿ ದಿನದೂಡುತ್ತಿದ್ದಾರೆ.

ಕೊರೊನಾ ಸೋಂಕು ಕಾರಣದಿಂದಾಗಿ ಶಾಲೆಗಳು ಬಂದ್ ಆಗಿರುವುದರಿಂದ ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು ಮತ್ತು ಉಪನ್ಯಾಸಕರು ಈಗ ಉದ್ಯೋಗವಿಲ್ಲದೆ ಅಕ್ಷರಶಃ ಸಂಕಷ್ಟದಲ್ಲಿದ್ದು ಈಗ ಕೂಲಿ ಕಾರ್ಮಿಕರಾಗಿದ್ದಾರೆ.
ಸರ್ಕಾರಿ ಶಾಲೆಗಳ ಶಿಕ್ಷಕರು ಆನ್ಲೈನ್ ತರಗತಿಗಳನ್ನು ಮಾಡುತ್ತಿದ್ದಾರೆ ಮತ್ತು ಕೋವಿಡ್ ಸಂಬಂಧಿತ ಕರ್ತವ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ ಖಾಸಗಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರು ಜೀವನೋಪಾಯಕ್ಕಾಗಿ ಶಾಲೆಗಳು ಮತ್ತು ಕಾಲೇಜುಗಳ ಪ್ರಾರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಸುಮಾರು ಮೂರು ತಿಂಗಳುಗಳು ಕಳೆದರೂ ಕೂಡಾ ಶಾಲಾ ಕಾಲೇಜುಗಳು ತೆರೆಯದ ಕಾರಣ ಪರ್ಯಾಯ ಹಾದಿಯಲ್ಲಿ ಸಾಗಿರುವ ಶಿಕ್ಷಕರು ಮನೆ ನಿರ್ಮಾಣದಂತಹ ಕೂಲಿ ಕೆಲಸ ಮಾಡುತ್ತಿದ್ದು ಕೆಲವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಶಿಕ್ಷಕಿಯರು ಮನೆಯಲ್ಲಿ ಕುಳಿತು ಬೀಡಿ ಸುತ್ತುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಖಾಸಗಿ ಶಾಲೆಯ ಶಿಕ್ಷಕ ಅಶೋಕ್ ಕುಮಾರ್ ಅವರು, ಜೂನ್ನಿಂದ ಇತ್ತೀಚಿನವರೆಗೂ ನಾನು ಕೃಷಿ ಕೆಲಸಕ್ಕೆ ಹೋಗುತ್ತಿದ್ದೆ. ಆದರೆ ಈಗ ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳು ಮುಗಿದಿವೆ. ಈಗ ನನಗೆ ಕೆಲಸವಿಲ್ಲ. ನನ್ನ ಭವಿಷ್ಯದ ಬಗ್ಗೆ ನನಗೆ ತಿಳಿದಿಲ್ಲ. ಸ್ವಲ್ಪ ಸಮಯದವರೆಗೆ ಕೂಲಿ ಕೆಲಸ ಮಾಡಿದ್ದೇನೆ. ನನ್ನ ಕುಟುಂಬದ ಬಗ್ಗೆ ನನಗೆ ಚಿಂತೆಯಾಗುತ್ತಿದೆ. ಅವರಿಗೆ ಹೇಗೆ ಆಹಾರ ಒದಗಿಸಲಿ ಎಂದು ತಿಳಿಯುತ್ತಿಲ್ಲ. ಇತರ ಶಿಕ್ಷಕರು ಸಹ ದಿನಗೂಲಿ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
"ಈಗ ಖಾಸಗಿ ಶಾಲೆಗಳಲ್ಲಿ ಆನ್ಲೈನ್ ತರಗತಿಗಳು ಪ್ರಾರಂಭವಾಗಿವೆ. ಆದರೆ ಅರ್ಧದಷ್ಟು ಶಿಕ್ಷಕರಿಗೆ ಸಂಬಳ ಮತ್ತು ಕೆಲಸವೂ ಸಿಗುತ್ತಿಲ್ಲ. ಶಾಲೆಯ ಆಡಳಿತ ಸಮಿತಿಯಿಂದ ಹಲವರನ್ನು ಅವಿರೋಧವಾಗಿ ತೆಗೆದುಹಾಕಲಾಗಿದೆ. ತಿಂಗಳಿಗೆ ನಾಲ್ಕೈದು ಸಾವಿರ ಸಂಬಳಕ್ಕೆ ಆನ್ಲೈನ್ ತರಗತಿಗಳನ್ನು ನಡೆಸುವ ಕೆಲವರನ್ನು ಮಾತ್ರ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 22,500 ಕ್ಕೂ ಹೆಚ್ಚು ಅತಿಥಿ ಶಿಕ್ಷಕರ ಅವಸ್ಥೆ ಇನ್ನೂ ಕೆಟ್ಟದಾಗಿದೆ. ಸಾಮಾನ್ಯವಾಗಿ ಅವರನ್ನು ಜೂನ್ ತಿಂಗಳಲ್ಲಿ ಆಯ್ಕೆ ಮಾಡಲಾಗುತ್ತಿದ್ದು ಜುಲೈನಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಆದರೆ, ಈ ವರ್ಷ ಶಿಕ್ಷಕರನ್ನು ಇಲ್ಲಿಯವರೆಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಆಹ್ವಾನ ನೀಡಿಲ್ಲ. ಈ ಪೈಕಿ ಹೆಚ್ಚಿನವರು ಬಡ ವರ್ಗದವರಾಗಿದ್ದು ತಮ್ಮ ಶಿಕ್ಷಣಕ್ಕಾಗಿ ಬ್ಯಾಂಕ್ ಸಾಲವನ್ನು ಕೂಡಾ ಪಡೆದುಕೊಂಡವರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 550 ಅತಿಥಿ ಶಿಕ್ಷಕರಿದ್ದು ಪ್ರಸ್ತುತ ಪುರುಷ ಅತಿಥಿ ಶಿಕ್ಷಕರು ಕೂಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಬೀದಿ ಬದಿಯಲ್ಲಿ ಹಣ್ಣು, ತರಕಾರಿಗಳ ಮಾರಾಟ ನಡೆಸುತ್ತಿದ್ದಾರೆ. ಶಿಕ್ಷಕಿಯರು ಮನೆಯಲ್ಲಿ ಬೀಡಿ ಸುತ್ತುವ, ಮೊದಲಾದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಿಗೆ ಸರ್ಕಾರ ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿತ್ರಲೇಖಾ ಅವರು ಹೇಳಿದ್ದಾರೆ.
"ನಾನು ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಸಕಳಾಗಿದ್ದೆ. ಮಾರ್ಚ್ ತಿಂಗಳವರೆಗೆ ನನಗೆ ಸಂಬಳ ನೀಡಿದ್ದು ಬಳಿಕ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಮೊಬೈಲ್ಗೆ ಎಸ್ಎಂಎಸ್ ಕಳುಹಿಸಿದ್ದಾರೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನಾನು ಹೇಗೆ ಮನೆಯನ್ನು ನೋಡಿಕೊಳ್ಳುವುದು ಎಂದು ನನಗೆ ತಿಳಿಯುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.