ಕಾಸರಗೋಡು, ಆ. 29 (DaijiworldNews/MB) : ದೇಶದ ಅತ್ಯುತ್ತಮ ಜಿಲ್ಲಾಧಿಕಾರಿಯವರ ಆಯ್ಕೆಯ ಕೊನೆಯ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬುರವರ ಹೆಸರು ಒಳಗೊಂಡಿದೆ.

ಕೊನೆಯದಾಗಿ 11 ರಾಜ್ಯಗಳ 12 ಜಿಲ್ಲಾಧಿಕಾರಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ ಈ ರಾಜ್ಯಗಳಲ್ಲಿ ಕೇರಳದಿಂದ ಸಜಿತ್ ಬಾಬುರವರ ಹೆಸರು ಮಾತ್ರ ಅಂತಿಮ ಪಟ್ಟಿಯಲ್ಲಿದೆ. ಕೆಲವೇ ದಿನಗಳಲ್ಲಿ ಅತ್ಯುತ್ತಮ ಜಿಲ್ಲಾಧಿಕಾರಿಯವರ ಆಯ್ಕೆ ಹೊರಬೀಳಲಿದೆ.
'ಅತ್ಯುತ್ತಮ ಸಾರ್ವಜನಿಕ ಸೇವೆ ಹಾಗೂ ದೂರುಗಳ ಪರಿಹಾರ' ಎಂಬ ವಿಷಯಗಳಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯ್ಕೆ ಸಮಿತಿ ಮುಂದೆ ಸಾಧನೆಯನ್ನು ಮುಂದಿಟ್ಟಿದ್ದರು. ಕಡತಗಳ ಇತ್ಯರ್ಥ, ತೆರಿಗೆ ವಸೂಲಿ, ದೂರು ಪರಿಹಾರ ಅದಾಲತ್, ಗ್ರಾಮ ಪಂಚಾಯತ್ಗಳ ಭೇಟಿ ಮೊದಲಾದ ಬಗ್ಗೆ ನಡೆಸಿದ ಸೇವಾ ಕಾರ್ಯ ಸಜಿತ್ ಬಾಬುರವರನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡುವಂತೆ ಮಾಡಿದೆ.
ಆಂದ್ರಪ್ರದೇಶದ ವೆಸ್ಟ್ ಗೋದಾವರಿ, ಅರುಣಾಚಲ ಪ್ರದೇಶದ ತವಾಂಗ್, ಬಿಹಾರದ ನವಾಡ್, ಯಮುನಾ ನಗರ, ಜಮ್ಮು ಕಾಶ್ಮೀರ ಗಂಡರ್ ಬಾಲ್, ಮಹಾರಾಷ್ಟ್ರದ ಪರ್ಬಾನಿ, ಪಂಜಾಬ್ ನ ಜಲಂಧರ್, ರಾಜಾಸ್ಥಾನದ ಸರಾಯ್, ತೆಲಂಗಾಣದ ಸಿರ್ಸಿಲಾ, ಉತ್ತರಪ್ರದೇಶದ ಝಾನ್ಸಿಯ ಜಿಲ್ಲಾಧಿಕಾರಿ ಅಂತಿಮ 11 ಮಂದಿಯಲ್ಲಿ ಒಳಗೊಂಡಿದ್ದಾರೆ.