ಬೆಂಗಳೂರು, ಮೇ 02: ಉಡುಪಿಯ ಎಂಜಿಎಂ ಮೈದಾನದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದ ಭಾಷಣದ ವೇಳೆ ದೇವೇಗೌಡರನ್ನು ಹಾಡಿ ಹೊಗಳಿದ ವಿಚಾರಕ್ಕೆ ಸಂಬಂಧಪಟ್ಟಂತೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಹೊಗಳಿದ್ದರಲ್ಲಿ ವಿಶೇಷ ಏನೂ ಇಲ್ಲ. ಪ್ರಧಾನಿ ಯಾವ ರಾಜ್ಯ ಮತ್ತು ಹೋದರೂ ಅವರು ಆ ರಾಜ್ಯದ ಹಿನ್ನೆಲೆ ಪ್ರಸ್ತುತ ವಿಚಾರಗಳನ್ನು ತಿಳಿದುಕೊಂಡೇ ಮಾತನಾಡುತ್ತಾರೆ ಎಂದಿದ್ದಾರೆ.
ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಪ್ರಧಾನಿಯವರಿಗೆ ಎಲ್ಲಿಗೆ ಹೋದಾಗ ಹೇಗೆ ಮಾತನಾಡಬೇಕೆಂಬುದು ಚೆನ್ನಾಗಿ ತಿಳಿದಿದೆ. ಆದರೆ ರಾಹುಲ್ ಗಾಂಧಿ ಇತ್ತೀಚೆಗೆ ಹಾಸನಕ್ಕೆ ಬಂದಾಗ ನನ್ನ ವಿರುದ್ಧ ಮಾತನಾಡಿದ್ದರು. ಈ ಬಗ್ಗೆ ನಾನೇನು ಹೇಳಲ್ಲ , ರಾಹುಲ್ ಇನ್ನೂ ಚಿಕ್ಕವರು, ಬೆಳೆಯಬೇಕು ಎಂದರು. ಆದರೆ ಜೆಎಚ್ ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧದಲ್ಲಿ ನನ್ನ ಫೋಟೊ ಹಾಕಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಫೋಟೊವನ್ನು ತೆಗೆಸಿದ್ದರು, ಎಂದು ಗೌಡರು ಇದೇ ವೇಳೆ ಆರೋಪಿಸಿದರು.