ಬೆಳ್ತಂಗಡಿ, ಆ 30 (DaijiworldNews/PY): ಬೆಳ್ತಂಗಡಿ ಜೂನಿಯರ್ ಕಾಲೇಜು ಬಳಿಯ ನಿವಾಸಿ ವಾಸು ಸಫಲ್ಯ ಅವರು ಆ.24ರಂದು ವಾಕಿಂಗ್ ಹೋಗುತ್ತಿದ್ದ ಸಂದರ್ಭ ತಲವಾರಿನಿಂದ ಹತ್ಯೆಗೈದ ಆರೋಪಿ ದಯಾನಂದ ಅವರನ್ನು ಆ.27ರಂದು ಘಟನಾ ಸ್ಥಳಕ್ಕೆ ಪೊಲೀಸರು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಬೆಳ್ತಂಗಡಿ ಜೂನಿಯರ್ ಕಾಲೇಜು ಬಳಿಯ ನಿವಾಸಿ ವಾಸು ಸಫಲ್ಯ ಅವರು ಆ.24ರಂದು ವಾಕಿಂಗ್ ಹೋಗುತ್ತಿದ್ದ ಸಂದರ್ಭ ಅವರ ಮಗ ದಯಾನಂದ ತಲವಾರಿನಿಂದ ಹತ್ಯೆಗೈದಿದ್ದ. ವಾಸು ಸಫಲ್ಯ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಸಾವನ್ನಪ್ಪಿದ್ದರು. ತಂದೆಯನ್ನು ಹತ್ಯೆಗೈದ ಬಳಿಕ ದಯಾನಂದ ಬಟ್ಟೆ ಬದಲಿಸಿ ಮಂಗಳೂರಿಗೆ ಪರಾರಿಯಾಗಿದ್ದು, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಆತ ನಂತೂರಿನ ಉದ್ಯಮಿಯೊಬ್ಬರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ದಯಾನಂದನನ್ನು ಆ.26ರಂದು ಪೊಲೀಸರು ಸ್ಟೇಟ್ ಬ್ಯಾಂಕ್ ಬಳಿ ಬಂಧಿಸಿದ್ದರು.
ತಂದೆಯನ್ನು ಹತ್ಯೆಗೈದ ಬಳಿಕ ಮಂಗಳೂರಿಗೆ ಪರಾರಿಯಾಗಿದ್ದ ಆರೋಪಿ ದಯಾನಂದನ ಮೊಬೈಲ್ ಟ್ರಾಕ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.
ಆ.27ರ ಸಂಜೆ 4 ಗಂಟೆಯ ಬಂಧಿತ ಆರೋಪಿ ದಯಾನಂದನನ್ನು ಘಟನಾ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಗಿದ್ದು, ವಾಸು ಸಫಲ್ಯ ಅವರನ್ನು ಹತ್ಯೆಗೈದು ಬಳಿಕ ಆತ ರಕ್ತಸಿಕ್ತ ಬಟ್ಟೆಗಳನ್ನು ಪೊದೆಗಳ ನಡುವೆ ಎಸೆದು, ನಂತರ ಬೇರೆ ಬಟ್ಟೆ ಧರಿಸಿ ಮಂಗಳೂರಿಗೆ ತೆರಳಿದ್ದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ, ಆರೋಪಿಯು ಎರಡು ತಿಂಗಳ ಹಿಂದೆಯೇ ತಲವಾರು ಸಿದ್ದಪಡಿಸಿ ಇಟ್ಟುಕೊಂಡಿರುವ ಬಗ್ಗೆ ತಿಳಿಸಿದ್ದಾನೆ.
ಆರೋಪಿ ದಯಾನಂದನನ್ನು ಘಟನಾ ಸ್ಥಳಕ್ಕೆ ಕರೆತಂದ ಸಂದರ್ಭ ದಯಾನಂದ್ನ ಸಹೋದರ ಹಾಗೂ ಆತನ ತಾಯಿ ಸಾವಿತ್ರಿ ಆಕ್ರೋಶ ವ್ಯಕ್ತಪಡಿಸಿದ್ದು, ಅಪ್ಪ ನಿನಗೆ 6 ತಿಂಗಳು ಮನೆಯಲ್ಲಿ ಊಟ ಹಾಕಿದ್ದರು. ಅಲ್ಲದೇಮ ಹತ್ಯೆ ಮಾಡುವ ಹಿಂದಿನ ದಿನ ಕೂಡಾ ಊಟ ಹಾಕಿದ್ದರು. ನನ್ನ ಅಪ್ಪನನ್ನು ಕೊಂದವರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ.
ನನ್ನ ಮಗನಿಗೆ ಗಲ್ಲು ಶಿಕ್ಷೆ ಕೊಡಿ. ಅಪ್ಪನನ್ನು ಕೊಂದ ಮಗ ನನಗೆ ಬೇಡ. ಅವನ ಹೆಣ ಕೂಡಾ ನಮ್ಮ ಮನೆಗೆ ಬರಬಾರದು ಎಂದು ವಾಸು ಸಫಲ್ಯರ ಪತ್ನಿ ಸಾವಿತ್ರಿ ಹೇಳಿದರು.