ಮಂಗಳೂರು, ಆ 30 (DaijiworldNews/PY): ಕೆನರಾ ಕೈಗಾರಿಕಾ ಸಮೂಹಗಳ ಸ್ಥಾಪಕಾಧ್ಯಕ್ಷ, ನವಭಾರತ ದೈನಿಕ ಸ್ಥಾಪನಾ ಸಂಪಾದಕ, ಕೆನರಾ ವರ್ಕ್ಶಾಪ್ಸ್ ಲಿಮಿಡೆಟ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಕುಡ್ವ ಅವರು ಆಗಸ್ಟ್ 29ರ ಶನಿವಾರ ರಾತ್ರಿ ನಂತೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕೆನರಾ ವರ್ಕ್ಶಾಪ್ಸ್ ಲಿಮಿಟೆಡ್ನ ಸಂಸ್ಥಾಪಕ ದಿವಂಗತ ವಿ ಎಸ್ ಕುಡ್ವಾ ಅವರ ಎರಡನೆಯ ಪುತ್ರ, ಶ್ರೀನಿವಾಸ್ ಕುಡ್ವಾ ಅವರು 1933 ರಲ್ಲಿ ಜನಿಸಿದ್ದು, ಇವರು ತಮ್ಮ ಶಾಲಾ ಶಿಕ್ಷಣವನ್ನು ಡೊಂಗರಕೇರಿ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಮಾಡಿ ಬಳಿಕ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿ ಎಸ್ ಸಿ ಪದವಿ ಪಡೆದರು ಹಾಗೂ ಯುಎಸ್ನಲ್ಲಿ ಉನ್ನತ ಶಿಕ್ಷಣ ಪಡೆದು ಬಳಿಕ ಲೆಹಿಘ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು.
ವಿದ್ಯಾಭ್ಯಾಸ ಮುಗಿದ ನಂತರ ಶ್ರೀನಿವಾಸ್ ಕುಡ್ವ ಅವರು, ಕೆನರಾ ವರ್ಕ್ಶಾಪ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರಿದ್ದರು. ಆಧುನಿಕ ತಂತ್ರಜ್ಞಾನವನ್ನು ಬಳಸಿ ತಮ್ಮ ಕಂಪೆನಿಯಾದ ಕೆನರಾ ಸ್ಪ್ರಿಂಗ್ಸ್ನ ಗುಣಮಟ್ಟವನ್ನು ಅಭಿವೃದ್ದಿಪಡಿಸಿದ್ದರು. ಹಾಗೂ ಸಾರಿಗೆ ಕ್ಷೇತ್ರದಲ್ಲಿ ಕೆನರಾ ಸ್ಪ್ರಿಂಗ್ಸ್ನ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರು ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ರೋಟರಿ ಕ್ಲಬ್, ಮಂಗಳೂರು ಮಿಡ್ಟೌನ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಲೋಕೋಪಕಾರಿ ಮತ್ತು ಸಮಾಜ ಸೇವಕರಾಗಿದ್ದ ಶ್ರೀನಿವಾಸ್ ಕುಡ್ವಾ ಅವರು, ತಮ್ಮ ಸ್ಥಳೀಯ ಸ್ಥಳವಾದ ಮುಲ್ಕಿಯ ವಿಜಯ ಕಾಲೇಜಿನ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದರು. ಇದಲ್ಲದೆ, ಅವರು ಪದವಿ ಪಡೆದ ಸೇಂಟ್ ಅಲೋಶಿಯಸ್ ಕಾಲೇಜಿಗೆ ಆರ್ಥಿಕ ಸಹಾಯವನ್ನೂ ನೀಡಿದ್ದರು. ಇದರೊಂದಿಗೆ ಅವರು ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು.
ಮೃತರು ಪತ್ನಿ ಶಾರದಾ, ಇಬ್ಬರು ಪುತ್ರರಾದ ಪ್ರೇಮನಾಥ್ ಕುಡ್ವ ಹಾಗೂ ವಸಂತ್ ಕುಡ್ವ, ಇಬ್ಬರು ಪುತ್ರಿಯರಾದ ಶೈಲಾ, ನೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಶ್ರೀನಿವಾಸ್ ಕುಡ್ವಾ ಅವರ ನಿಧನಕ್ಕೆ, ಅವರ ಹಿತೈಷಿಗಳು, ಸಂಬಂಧಿಕರು, ಕೆನರಾ ವರ್ಕ್ಶಾಪ್ಸ್ ಹಾಗೂ ಸಿಪಿಸಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.