ಬಂಟ್ವಾಳ, ಆ. 30 (DaijiworldNews/SM): ಶ್ರಮದಾನ ಮಾಡುವ ವೇಳೆ ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದು ಪರಿಣಾಮ ಯುವಕನೋರ್ವ ಮೃತಟ್ಟು, ಬಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಅಮ್ಮುಂಜೆ ಎಂಬಲ್ಲಿ ನಡೆದಿದೆ.

ಅಮ್ಮುಂಜೆ ಗ್ರಾಮದ ಮಾದಕೋಡಿ ಎಂಬಲ್ಲಿ ಘಟನೆ ನಡೆದಿದ್ದು ಇದರಿಂದಾಗಿ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗುಡ್ಡೆಮನೆ ನಿವಾಸಿ ನೀಲಯ್ಯ ಪೂಜಾರಿ ಅವರ ಪುತ್ರ ಜನಾರ್ಧನ ಅಂಚನ್ (35) ಮೃತಪಟ್ಟಿದ್ದಾರೆ. ಉಳಿದಂತೆ ಬಾಲಕ ವೃಷಭ (11) ಹಾಗೂ ಸೂರಜ್ (20) ಘಟನೆ ಯಲ್ಲಿ ಅಲ್ಪಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮ್ಮುಂಜೆ ಗ್ರಾಮದ ಧಾರ್ಮಿಕ ಕ್ಷೇತ್ರದಲ್ಲಿ ಹಳೆಯ ಕಟ್ಟಡದ ಗೋಡೆಯನ್ನು ತೆಗೆಯುವ ಕೆಲಸ ಶ್ರಮದಾನದ ಮೂಲಕ ನಡೆಯುತ್ತಿತ್ತು. ಶ್ರಮದಾನದ ವೇಳೆ ಹಳೆಯ ಕಟ್ಟಡದ ಗೋಡೆಯ ಕಲ್ಲು ಜನಾರ್ಧನ ಅವರ ಮೈಮೇಲೆ ಬಿದ್ದಿದೆ. ಪರಿಣಾಮ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಅಪರಾಧ ವಿಭಾಗದ ಎಸ್.ಐ.ಸಂಜೀವ ಕೆ. ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.