ಕಾಸರಗೋಡು, ಆ. 30 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಐದು ಸಾವಿರ ದಾಟಿದೆ. ದೇಶದಲ್ಲೇ ಮೂರನೇ ಪ್ರಕರಣ ಪತ್ತೆಯಾದ ಕಾಸರಗೋಡಿನಲ್ಲಿ ಏಳು ತಿಂಗಳಲ್ಲಿ ಸೋಂಕಿತರ ಸಂಖ್ಯೆ ಐದು ಸಾವಿರ ದಾಟಿದ್ದು, ಇದುವರಗೆ 5,039 ಮಂದಿಗೆ ಸೋಂಕು ತಗುಲಿದೆ.

ಈ ಪೈಕಿ 4090 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ವಿದೇಶದಿಂದ ಬಂದ 550 ಮಂದಿ ಹಾಗೂ ಹೊರರಾಜ್ಯಗಳಿಂದ ಬಂದ 399 ಮಂದಿಗೆ ಸೋಂಕು ತಗುಲಿದೆ. ಇದುವರೆಗೆ 60,488 ಮಂದಿಯ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲಾಗಿತ್ತು. ಮೇ ಆರಂಭದಲ್ಲಿ ಜಿಲ್ಲೆ ಸಂಪೂರ್ಣ ಸೋಂಕು ಮುಕ್ತವಾದರೂ ಬಳಿಕ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಾ ಸಾಗಿತು. ಜುಲೈ 17 ಕ್ಕೆ ಜಿಲ್ಲೆಯಲ್ಲಿ ಮೊದಲ ಕೊರೋನಾ ಬಲಿ ವರದಿಯಾಗಿದ್ದು, ಆಗಸ್ಟ್ 30ರ ತನಕ 38 ಮಂದಿ ಬಲಿಯಾಗಿದ್ದಾರೆ. ಜುಲೈ 22ರಿಂದ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. 19 ದಿನ ನೂರು ಹಾಗೂ ಒಂದು ಬಾರಿ 200ರ ಗಡಿದಾಟಿದೆ. ಮೂರನೇ ಹಂತದಲ್ಲಿ 4866 ಪ್ರಕರಣ ದ್ರಢಪಟ್ಟಿದೆ.
ಫೆಬ್ರವರಿ 3ರಂದು ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಮೊದಲ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿತ್ತು. ದೇಶದಲ್ಲಿ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು. ಆದರೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ದಿಟ್ಟ ನಿರ್ಧಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹರಡುವುದನ್ನು ಕಡಿವಾಣ ಹಾಕಲು ಸಾಧ್ಯವಾಗಿದೆ.
ಆದಿತ್ಯವಾರ 159 ಮಂದಿಗೆ ಸೋಂಕು:
ಜಿಲ್ಲೆಯಲ್ಲಿ ಆದಿತ್ಯವಾರ 159 ಮಂದಿಗೆ ಪಾಸಿಟಿವ್ ದ್ರಢಪಟ್ಟಿದ್ದು, 143 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 9 ಮಂದಿ ವಿದೇಶ ಹಾಗೂ 7 ಮಂದಿ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. 117 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 6218 ಮಂದಿ ನಿಗಾದಲ್ಲಿದ್ದು, 1060 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಈಗ 1431 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರಗೆ ಒಟ್ಟು 38 ಮಂದಿ ಮೃತಪಟ್ಟಿದ್ದಾರೆ. 3570 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸೋಂಕಿತರಲ್ಲಿ 17 ಮಕ್ಕಳು:
ಆದಿತ್ಯವಾರ ಕೊರೋನಾ ಸೋಂಕಿತರಲ್ಲಿ ಹತ್ತು ವರ್ಷ ಕೆಳಗಿನ 17 ಮಕ್ಕಳು ಒಳಗೊಂಡಿದ್ದಾರೆ. ನೀಲೇಶ್ವರ ನಗರಸಭಾ ವ್ಯಾಪ್ತಿಯಲ್ಲಿ 4, ಚೆಂಗಳ, ಪಳ್ಳಿಕೆರೆ, ಕಾಞಂಗಾಡ್, ಮಂಜೇಶ್ವರದಲ್ಲಿ ತಲಾ 2, ಕಾಸರಗೋಡು, ಅಜನೂರು, ಕುಂಬಳೆ, ಕಯ್ಯೂರು ಚಿಮೇನಿ, ಚೆಮ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಂದು ಮಕ್ಕಳಿಗೆ ಸೋಂಕು ದೃಢಪಟ್ಟಿದೆ.