ಮಂಗಳೂರು, ಮೇ 03: ರಾಜ್ಯ ಪರಿಸರ ಹಾಗೂ ಅರಣ್ಯ ಇಲಾಖೆ ಸಚಿವ ಬಿ. ರಮಾನಾಥ ರೈ ಯವರ ಹಿರಿಯ ಸಹೋದರ ಬೆಳ್ಳಿಪ್ಪಾಡಿ ಡಾ. ಸತೀಶ್ ರೈ (74 ) ಇವರು ಹೃದಯ ಸಂಬಂಧಿ ಖಾಯಿಲೆಯಿಂದ ಮೇ 2 ಬುಧವಾರ ಸಂಜೆ ಬೆಂಗಳೂರಿನಲ್ಲಿ ನಿಧನಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆ ಉಸಿರೆಳೆದಿದ್ದಾರೆ.ಬೆಳ್ಳಿಪಾಡಿ ನಾರಾಯಣ ರೈ ದಂಪತಿಗಳಿಗೆ ನಾಲ್ವರು ಮಕ್ಕಳು ಮೊದಲನೆಯವರು ರಾಜಶೇಖರ ರೈ ಕಳ್ಳಿಗೆ, ಎರಡನೆಯವರು ಡಾ. ಸತೀಶ್ ರೈ ಮೈಸೂರು, ಮೂರನೆ ಮಗಳು ಸಕಲೇಶಪುರದಲ್ಲಿದ್ದಾರೆ. ಕೊನೆಯವರು ರಮಾನಾಥ ರೈ.ಸಾಹಿತ್ಯಾಸಕ್ತಿ ಹೊಂದಿದ್ದ ಅವರು 22 ಕೃತಿಗಳನ್ನು ರಚಿಸಿದ್ದಾರೆ. ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ವೇದಿಕೆಯ ಮೂಲಕ ಯಕ್ಷಗಾನಕ್ಕೂ ಪ್ರಾಶಸ್ತ್ಯವನ್ನು ನೀಡಿ ಯಕ್ಷಗಾನವನ್ನು ಪೋಷಿಸಿದ್ದರು. ವೈದರ ತಂಡದೊಂದಿಗೆ ಆರೋಗ್ಯ ಯಜ್ಞ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಲಕ್ಷ ವೃಕ್ಷ ಯಜ್ಞ ಗಳ ಮೂಲಕ ಆರೋಗ್ಯ ಹಾಗೂ ಪರಿಸರ ಜಾಗೃತಿ ಮೂಡಿಸಿದ್ದರು. ಅದಕ್ಕಾಗಿ ಅವರಿಗೆ ಹಲವು ಪ್ರಶಸ್ತಿಗಳು ಬಂದಿದ್ದವು.ಗುರುವಾರ ಬೆಳಿಗ್ಗೆ ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಅವರ ಸ್ವಗ್ರಹ ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಸತೀಶ್ ರೈ ಪತ್ನಿ ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.