ಉಡುಪಿ, ಆ. 31 (DaijiworldNews/MB) : ''ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೆಪ್ಟೆಂಬರ್ ಒಂದರಿಂದ ಸೇವೆ ಆರಂಭಿಸಬಹುದು. ಆದರೆ ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ'' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ''ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಎರಡು ದಿನದಲ್ಲಿ ಬರಬಹುದು'' ಎಂದು ತಿಳಿಸಿದ್ದಾರೆ.
''ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶವಿದ್ದು ಚಿನ್ನದ ರಥ ಸೇವೆ ಬೆಳ್ಳಿ ರಥ ಸೇವೆ ಹೇಗೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಕೊರೊನಾ ಮಾರ್ಗಸೂಚಿಯಂತೆ ನೂರಾರು ಜನರು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಹತ್ತು-ಹದಿನೈದು ಜನರು ಸೇರಿ ಮಾಡುವಂತಹ ಧಾರ್ಮಿಕ ಸೇವೆ ನಡೆಸಲು ಮಾತ್ರ ಅವಕಾಶ ನೀಡುವ ಚಿಂತನೆ ಇದೆ. ಕೊರೊನಾ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ'' ಎಂದು ತಿಳಿಸಿದ್ದಾರೆ.