ಉಡುಪಿ, ಮೇ 03: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನೇರ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪ್ರಧಾನಿಗಳ ಗಮನಕ್ಕೆ ತಂದಿದೆ.
ಮೇ.2ರಂದು ಬಿಜೆಪಿ ರೈತ ಮೋರ್ಚಾದೊಂದಿಗೆ ಪ್ರಧಾನಿ ಸಂವಾದ ಕಾರ್ಯಕ್ರಮ ನಡೆದಿದ್ದು, ಈ ನೇರ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಮುಂದಿಡಲು ಅವಕಾಶವಿದೆ. ಅದರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಅವರು ಕರಾವಳಿಯ ಏಕೈಕ ಸಕ್ಕರೆ ಕಾರ್ಖಾನೆ ಬ್ರಹ್ಮಾವರದಲ್ಲಿದ್ದು, ಅದು ಈಗ ಮುಚ್ಚಿ ಹೋಗಿದ್ದು, ರೈತರು ಪರ್ಯಾಯ ಬೆಳೆಯಾಗಿ ಕಬ್ಬು ಬೆಳೆಯಲು ಸಾಧ್ಯವಾಗಿರುವುದಿಲ್ಲ. ದಯವಿಟ್ಟು ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಹಾಗೂ ಉಡುಪಿ ಜಿಲ್ಲೆಯ ೩೫ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರಗಂಗೆ ಕಳೆಯಿಂದ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ.
ಈ ಕಳೆ ನಾಶ ಮಾಡಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಕೃಷಿಕರಿಗೆ ಸಮಸ್ಯೆ ಉಲ್ಬಣಿಸಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಮಾಡಿಕೊಡಬೇಕು ಎಂದು ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಧೀರಜ್ , ಸತ್ಯರಾಜ್ ಬಿರ್ತಿ,ಉಮೇಶ ಶೆಟ್ಟಿ ಉಪಸ್ಥಿತರಿದ್ದರು.