ಉಡುಪಿ, ಆ. 31 (DaijiworldNews/SM): ಕೋವಿಡ್-19 ಪರಿಣಾಮವಾಗಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡಲಾಗಿದ್ದು, ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಗ್ರಾ.ಪಂ. ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು. ಸಂಘಟನೆ, ಕ್ರಿಯಾಶೀಲತೆ ಮತ್ತು ಪರಿಣಾಮಕಾರಿ ಅಗತ್ಯ ಚಟುವಟಿಕೆಗಳಿಂದ ಗೆಲುವಿನ ಗುರಿಯತ್ತ ತೊಡಗಿಸಿಕೊಳ್ಳಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ-ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು ಕಾರ್ಯಕರ್ತರು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಅವಕಾಶದ ಸದುಪಯೋಗ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ನಿಗಧಿತ ಮೀಸಲಾತಿಯಂತೆ ಆಯಾ ವಾರ್ಡ್ಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಗೂ ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರ ರೂಪಿಸುವುದು ಪ್ರಮುಖ್ಯತೆ ಹೊಂದಿದೆ. ಪ್ರತೀ ಮತಗಟ್ಟೆ, ಮಹಾ ಶಕ್ತಿಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ವಿವಿಧ ಸ್ತರದ ಜನಪ್ರತಿನಿಧಿಗಳು ಕಾರ್ಯಕರ್ತರೊಂದಿಗೆ ಒಂದು ತಂಡವಾಗಿ ತೊಡಗಿಸಿಕೊಂಡು ಗ್ರಾ.ಪಂ. ಚುನಾವಣೆಯಲ್ಲಿ ಪ್ರಚಂಡ ಗೆಲುವಿಗೆ ಸಾಧಿಸಬೇಕೆಂದರು.