ಕಾಸರಗೋಡು, ಆ 31 (DaijiworldNews/SM): ಮೀಯಪದವು ಬೆರಿಕೆಯ ಕೃಪಾಕರ(28) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಉಮೇಶ್(28), ಜನಾರ್ಧನ(29), ಶಿವ ಪ್ರಸಾದ್(32), ನಂದೀಶ್(30) ಎಂದು ಗುರುತಿಸಲಾಗಿದೆ. ಆಗಸ್ಟ್ 26ರಂದು ರಾತ್ರಿ ಕೊಲೆ ನಡೆದಿತ್ತು. ಮೀಯಪದವಿನ ಜಿತೇಶ್ ಎಂಬವರ ಮನೆ ಸಮೀಪ ಕೃತ್ಯ ನಡೆದಿತ್ತು. ಗುಂಪೊಂದು ಕೃಪಾಕರನನ್ನು ಬಡಿದು ಕೊಲೆಗೈದಿತ್ತು. ಜಿತೇಶ್ ನ ಮೇಲೆ ಹಲ್ಲೆಗೆ ಮುಂದಾಗಿದ್ದಾಗ ಸ್ಥಳಕ್ಕೆ ತಲುಪಿದ ತಂಡವು ಕೃಪಾಕರನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಸ್ಥಿತಿಯಲ್ಲಿ ಕೃಪಾಕರನನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ತಲೆಗೆ ಬಿದ್ದ ಗಂಭೀರ ಗಾಯಗಳಿಂದ ಕೃಪಾಕರ ಮೃತಪಟ್ಟಿದ್ದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.
ಘಟನೆಯ ವಿವರ:
ಈ ಹಿಂದೆ ಜಿತೇಶ್ ಮತ್ತು ಕೃಪಾಕರ ಸ್ನೇಹಿತರಾಗಿದ್ದರು. ಆದರೆ ಕೃಪಾಕರ ಗಾಂಜಾ ಹಾಗೂ ಮದ್ಯ ವ್ಯಸನಿಯಾದ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿಂದ ಜಿತೇಶ್ ದೂರ ಉಳಿದಿದ್ದ. ಇದರಿಂದ ಕೃಪಾಕರ ಜಿತೇಶ್ ನೊಂದಿಗೆ ಹಲವು ಬಾರಿ ಜಗಳವಾಡಿದ್ದ ಎನ್ನಲಾಗಿದೆ.
ಈ ನಡುವೆ 26ರಂದು ರಾತ್ರಿ ಮನೆಯ ಹಿಂಬದಿಯ ಆವರಣ ಗೋಡೆ ಹಾರಿ ಕೃಪಾಕರ ಜಿತೇಶ್ ನ ಮನೆಗೆ ಬಂದಿದ್ದ. ಹಲವು ಬಾರಿ ಕೃಪಾಕರ ಬಾಗಿಲು ತೆರೆಯಲು ಒತ್ತಾಯಿಸಿದರೂ, ಸಹೋದರಿ ಮತ್ತು ಸಹೋದರಿಯ ಒತ್ತಡಕ್ಕೆ ಮಣಿದು ಜಿತೇಶ್ ಬಾಗಿಲು ತೆರೆಯಲು ಮುಂದಾಗಲಿಲ್ಲ. ಆದರೆ ಕೃಪಾಕರ ಬಾಗಿಲು ಬಡಿದು ಮುರಿಯುವ ಭಯದಿಂದ ಜಿತೇಶ್ ಬಾಗಿಲು ತೆರೆದಿದ್ದು , ಒಳ ಬಂದ ಕೃಪಾಕರ ಕೈಯಲ್ಲಿದ್ದ ಕತ್ತರಿಯಿಂದ ಜಿತೇಶ್ ನ ಮೇಲೆ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿತ್ತು. ಮನೆಯವರ ಬೊಬ್ಬೆ ಕೇಳಿ ಧಾವಿಸಿ ಬಂದ ಪರಿಸರವಾಸಿಗಳು ಕೃಪಾಕರನನ್ನು ಹಿಡಿಯಲೆತ್ನಿಸಿದ್ದು, ಈ ಸಂದರ್ಭದಲ್ಲಿ ಹೊಡೆದಾಟ ನಡೆದು ಗುಂಪು ಕೃಪಾಕರನನ್ನು ಥಳಿಸಿದೆ. ಇದರಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಂಜೇಶ್ವರ ಠಾಣಾ ಪೊಲೀಸರು ಕೃಪಾಕರನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದಿದ್ದರು. ತನಿಖೆ ನಡೆಸಿದಾಗ ಇದು ಕೊಲೆ ಎಂದು ಸಾಬೀತಾಗಿತ್ತು.