ಕಾರವಾರ, ಮೇ 03 : ಕಳೆದ ಎರಡು ದಿನಗಳಿಂದ, ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೆಟ್ಟು ನಿಂತಿದ್ದ ದೋಣಿಯನ್ನು ಹಾಗೂ ಅದರಲ್ಲಿದ ಒಂಬತ್ತು ಜನ ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮಂಗಳವಾರ ರಕ್ಷಣೆ ಮಾಡಿದೆ. ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದ ‘ಸೇಂಟ್ ಮೇರಿ’ ಎಂಬ ಹೆಸರಿನ ಈ ದೋಣಿಯು, ದಡದಿಂದ 14 ನಾಟಿಕಲ್ ಮೈಲು (ಅಂದಾಜು 26 ಕಿ.ಮೀ) ದೂರದಲ್ಲಿತ್ತು. ಅದರಲ್ಲಿದ್ದ ಆಹಾರ ಪದಾರ್ಥಗಳು ಮತ್ತು ಕುಡಿಯುವ ನೀರು ಖಾಲಿಯಾಗಿ ಮೀನುಗಾರರು ಪರದಾಡುತ್ತಿದ್ದರು. ಈ ಬಗ್ಗೆ ಐಸಿಜಿಯ ಕಾರವಾರ ಪ್ರಧಾನ ಕಚೇರಿಯಿಂದ ಸಂದೇಶ ಬಂದ ಕೂಡಲೇ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ದೋಣಿಯ ಎಂಜಿನ್ಗೆ ಹಾನಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂತು. ಆದರೆ, ಅದನ್ನು ಸಮುದ್ರ ಮಧ್ಯದಲ್ಲಿ ದುರಸ್ತಿ ಮಾಡಲು ಸಾಧ್ಯವಿರಲಿಲ್ಲ. ಕಣ್ಣಳತೆಯ ದೂರದಲ್ಲಿ ಬೇರೆ ದೋಣಿಗಳೂ ಇರಲಿಲ್ಲ. ಹೀಗಾಗಿ ಕಾವಲು ಪಡೆಯ ಹಡಗಿನ ಸಹಾಯದಿಂದ ದಡಕ್ಕೆ ಎಳೆದು ತರಲಾಯಿತು’ ಎಂದು ಐಸಿಜಿ ಪ್ರಕಟಣೆ ತಿಳಿಸಿದೆ.