ಮಂಗಳೂರು, ಸೆ. 01 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೀನುಗಾರಿಕೆ ಅವಧಿ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಮೀನುಗಾರಿಕೆ ದೋಣಿಗಳನ್ನು ಸಮುದ್ರಕ್ಕೆ ಇಳಿಯಲು ಸಿದ್ಧವಾಗಿರಿಸಲಾಗಿದೆ. ಲಾಕ್ಡೌನ್ ಕಾರಣದಿಂದ ಇತರ ರಾಜ್ಯಗಳಿಗೆ ತೆರಳಿದ್ದ ವಲಸೆ ಮೀನುಗಾರರು ಹಲವು ದಿನಗಳ ಬಳಿಕ ಈಗ ವಾಪಾಸ್ ಆಗುತ್ತಿದ್ದಾರೆ. ಆಳ ಸಮುದ್ರದ ಮೀನುಗಾರಿಕೆ ಇಂದು ಪುನರಾರಂಭಗೊಳ್ಳಲಿದೆ.

ಇಲ್ಲಿ ಆಳ ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಪೈಕಿ ಸುಮಾರು 80 ಪ್ರತಿಶತ (12,000) ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದ ಇತರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ, ಇತರ ರಾಜ್ಯಗಳಿಂದ ಬರುವ ಮೀನುಗಾರಿಕಾ ಕಾರ್ಮಿಕರು ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ. ಅವರು ಯಾವುದೇ ಸೋಂಕು ಲಕ್ಷಣಗಳು ಹೊಂದಿದ್ದಲ್ಲದಿದ್ದರೆ ನೇರವಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಇನ್ನು ವಾಪಾಸ್ ತಮ್ಮ ರಾಜ್ಯಗಳಿಗೆ ಹೋದವರ ಪೈಕಿ ಶೇಕಡಾ 25 ರಷ್ಟು ಮಂದಿ ಮರಳಿ ಬಂದಿದ್ದಾರೆ.
ಮೀನುಗಾರರು ಆಳ ಸಮುದ್ರದ ಮೀನುಗಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ಲಭ್ಯವಿರುವ ಕಾರ್ಮಿಕರು ಸೇರಿ ಮೀನುಗಾರಿಕೆ ನಡೆಸಲು ಸಿದ್ದರಾಗಿದ್ದಾರೆ. ತಮ್ಮ ದೋಣಿಗಳನ್ನು ಸೋಮವಾರವೇ ಸಿದ್ದ ಪಡಿಸಿದ್ದು ಎಂಜಿನ್ಗಳನ್ನು ದುರಸ್ತಿ ಮಾಡಿ ಎಲ್ಲಾ ಅಂತಿಮ ತಯಾರಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಮೀನುಗಾರಿಕೆಗೆ ಬೇಕಾಗಿರುವ ಐಸ್ ಪ್ಲಾಂಟ್ಗಳನ್ನು ತೆರೆಯಲಾಗಿದೆ. ಆರಂಭದಲ್ಲಿ, ಕೆಲವೇ ದೋಣಿಗಳು ಮಾತ್ರ ಮೀನುಗಾರಿಕೆಗೆ ತೆರಳಲಿದ್ದು ಬಳಿಕ ಹತ್ತು ದಿನಗಳ ಬಳಿಕ ಮೀನುಗಾರಿಕ ದೋಣಿ ಹಿಂತಿರುಗಲಿದೆ ಎಂದು ಬಂದರ್ನ ಮೀನುಗಾರ ಮಜೀದ್ ತಿಳಿಸಿದ್ದಾರೆ.
ಕೊರೊನಾವೈರಸ್ ಸಮಸ್ಯೆ ಮತ್ತು ಕಾರ್ಮಿಕರ ಕೊರತೆಯಿಂದಾಗಿ, ಆಳ ಸಮುದ್ರದ ಮೀನುಗಾರಿಕೆಯನ್ನು ಈ ಬಾರಿ ಒಂದು ತಿಂಗಳ ವಿಳಂಬದೊಂದಿಗೆ ಪುನರಾರಂಭಿಸಲಾಗುತ್ತಿದೆ. ಪ್ರಸ್ತುತ ಮಾರ್ಗಸೂಚಿಯಲ್ಲಿ ಕ್ವಾರಂಟೈನ್ ನಿಯಮವಿಲ್ಲ ಹಾಗೂ ಸೇವಾ ಸಿಂಧು ಆಪ್ ನೋಂದಣಿ ಕೂಡಾ ಕಡ್ಡಾಯವಲ್ಲ. ಆದ್ದರಿಂದ, ಇತರ ರಾಜ್ಯಗಳ ಮೀನುಗಾರರು ಮತ್ತೆ ಮಂಗಳೂರಿಗೆ ವಾಪಾಸ್ ಬರುತ್ತಿದ್ದಾರೆ.
ಮೀನುಗಾರಿಕೆ ನಿಷೇಧದ ಸಮಯದಲ್ಲಿ, ತಮಿಳುನಾಡಿನಿಂದ ಮೀನುಗಳನ್ನು ದಕ್ಷಿಣ ಕನ್ನಡಕ್ಕೆ ಸರಬರಾಜು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೀನುಗಳ ಬೆಲೆ ದ್ವಿಗುಣಗೊಂಡಿದೆ. ಕಲೆವು ದಿನಗಳಿಂದ ಮಲ್ಪೆ, ಕಾರವರ, ಭಟ್ಕಲ ಮುಂತಾದವುಗಳಲ್ಲಿಂದಲ್ಲೂ ಮೀನುಗಳು ಮಂಗಳೂರಿಗೆ ಬರುತ್ತಿದೆ. ಇನ್ನು ಬಂದರ್ನಲ್ಲಿ ಮೀನುಗಾರಿಕೆ ಆರಂಭವಾದ ಬಳಿಕ ಬೆಲೆಯೂ ಕೊಂಚ ಇಳಿಕೆಯಾಗುವತಾಜಾ ಮೀನುಗಳನ್ನು ದೊರಕುವ ನಿರೀಕ್ಷೆಯಲ್ಲಿದ್ದಾರೆ ಮೀನು ಖಾದ್ಯ ಪ್ರಿಯರು.
ಇನ್ನು ಈ ಬಗ್ಗೆ ಮಾತನಾಡಿದ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ ಅವರು, ಕೊರೊನಾ ನಿಯಮಗಳನ್ನು ಸಡಿಲಿಸಿದ್ದರೂ ಸಹ, ಉದ್ಯೋಗಿಗಳಲ್ಲಿ ಕೊರೊನಾದ ಭಯ ಕಡಿಮೆಯಾಗಿಲ್ಲ. ಕೆಲವೇ ಕಾರ್ಮಿಕರು ಮಾತ್ರ ಬಂದಿದ್ದಾರೆ ಮತ್ತು ದೋಣಿ ಮಾಲೀಕರು ಒಡಿಶಾದಿಂದ ಕಾರ್ಮಿಕರನ್ನು ಕರೆತರಲು ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಅವರು, ಆಳಸಮುದ್ರ ಮೀನುಗಾರಿಕೆ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಕ್ವಾರಂಟೈನ್ ಹಾಗೂ ಇತರೆ ನಿಯಮಗಳನ್ನು ಸಡಿಲಿಕೆ ಮಾಡಿರವುದರಿಂದ ಯಾವುದೇ ತೊಂದರೆಗಳಿಲ್ಲ. ಮೀನುಗಾರಿಕೆ ಸರಾಗವಾಗಿ ನಡೆಯುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಆಗಸ್ಟ್ 10 ರಂದು ಮಲ್ಪೆಯಲ್ಲಿ ಯಾಂತ್ರಿಕೃತ ಮೀನುಗಾರಿಕೆ ಪ್ರಾರಂಭವಾಗಿದ್ದು ಆಳ ಸಮುದ್ರದ ಮೀನುಗಾರಿಕೆಗೆ ಕೂಡಾ ದೋಣಿಗಳು ತೆರಳಿದೆ. ಸೀಮಿತ ಸಂಖ್ಯೆಯ ಕಾರ್ಮಿಕರು ಮಾತ್ರ ತಮ್ಮ ರಾಜ್ಯಗಳಿಂದ ಹಿಂದಿರುಗಿದ್ದಾರೆ.