ಮಂಗಳೂರು, ಸೆ. 01 (DaijiworldNews/MB) : ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿಯಾದ ಜಿ ಜಗದೀಶ್ ಅವರು ಈ ಪ್ರಕರಣದ ಮ್ಯಾಜಿಸ್ಟ್ರೀಯಲ್ ತನಿಖೆ ವಿಚಾರಣೆಯನ್ನು ಇಂದಿಗೆ ಅಂತ್ಯಗೊಳಿಸಿದ್ದಾರೆ.

ಜಿಲ್ಲಾಧಿಕಾರಿ, ಎಸಿ, ಪೊಲೀಸ್ ಸಿಬ್ಬಂದಿ, ಸೇರಿ ಮೂವರು ವೈದ್ಯರ ಸಹಿತ ಒಟ್ಟು 45 ಮಂದಿಯ ಸಾರ್ವಜನಿಕರ ಅಂತಿಮ ವಿಚಾರಣೆ ನಡೆಸಲಾಗಿದೆ. ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ವಿಚಾರಣೆಯನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾಯಿತು. ಹಾಗೆಯೇ ನಿರ್ಗಮಿತ ಆಯುಕ್ತರಾದ ಹರ್ಷ ಅವರ ಪರವಾಗಿ ಎಸಿಪಿ ದಾಖಲೆ ಸಲ್ಲಿಸಿದ್ದಾರೆ.
ಈವರೆಗೆ ಒಟ್ಟು 416 ಮಂದಿಯ ವಿಚಾರಣೆ ನಡೆಸಲಾಗಿದ್ದು ಈ ತಿಂಗಳ 20 ರ ಒಳಗಾಗಿ ಸರ್ಕಾರಕ್ಕೆ ತನಿಖಾಧಿಕಾರಿ ಜಗದೀಶ್ ಅವರು ತನಿಖಾ ವರದಿ ಸಲ್ಲಿಸಲ್ಲಿದ್ದಾರೆ.
ಕಳೆದ ವರ್ಷ ಡಿಸೆಂಬರ್ 19 ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದರು. ಗುಂಡಿನ ದಾಳಿಯಿಂದಾಗಿ ಇಬ್ಬರು ಪ್ರತಿಭಟನಾಕಾರರಾದ ನೌಶೀನ್ ಹಾಗೂ ಜಲೀಲ್ ಕುದ್ರೋಳಿ ಮೃತಪಟ್ಟಿದ್ದರು. ಬಳಿಕ ಸರ್ಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿತ್ತು.