ಮಂಗಳೂರು, ಮೇ 03: ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ನರೇಂದ್ರ ಮೋದಿ ಮೇ ೧ರ ಮಂಗಳವಾರ ಎಂಜಿಎಂ ಮೈದಾನದಲ್ಲಿ ನಡೆದಿದ್ದ, ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಕೃಷ್ಣಮಠಕ್ಕೆ ಭೇಟಿ ನೀಡದೆ ತೆರಳಿರುವ ವಿಚಾರ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಇವೆಲ್ಲದರ ನಡುವೆ ಮೇ 5 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಆ ದಿನ ಉಡುಪಿ ಅಷ್ಟಮಠಕ್ಕೆ ಭೇಟಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಅಷ್ಟಮಠ ಮೋದಿ ಭೇಟಿ ನೀಡದೆ ಇರಲು ಅಲ್ಲಿನ ಭದ್ರತಾ ಲೋಪ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ದೇಗುಲದ ಆಡಳಿತ ಮಂಡಳಿ, ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪ ಇಲ್ಲ. ಅವರು ಸಮಯದ ಅಭಾವದಿಂದಾಗಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲೂ ಭಾರೀ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಖುದ್ದು ಪೇಜಾವರ ಶ್ರೀಗಳೇ ನೋವು ವ್ಯಕ್ತಪಡಿಸಿ ಪ್ರಧಾನಿ ಅವರಿಗೆ ಪತ್ರ ಬರೆದು ಉಡುಪಿ ಮಠಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ ಇದೀಗ ಮೇ 5ರಂದು ಮಂಗಳೂರಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಆ ದಿನ ಉಡುಪಿ ಮಠಕ್ಕೆ ಭೇಟಿ ನೀಡಿ ಈ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.