ಮಂಗಳೂರು, ಸೆ. 02 (DaijiworldNews/MB) : ''ಎಂಟು ವರ್ಷಗಳ ಹಿಂದೆ ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದು ಡ್ರಗ್ಸ್ ಮಾಫಿಯಾದ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದೇನೆ. ಹಾಗೆಯೇ ಈ ಮಾಫಿಯಾವು ಹೇಗೆ ಕಾರ್ಯನಿರ್ವಹಿಸುತ್ತಿದೆ ಹಾಗೂ ಪೊಲೀಸ್ ಇಲಾಖೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದೆ'' ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ಯ ವಿಧಾನಸಭೆಯ ಮಾಜಿ ಉಪ ಸ್ಪೀಕರ್ ಮತ್ತು ಬಿಜೆಪಿ ನಾಯಕ ಎನ್ ಯೋಗೀಶ್ ಭಟ್ ಅವರು ತಿಳಿಸಿದ್ದಾರೆ.

ತಾನು ಉಪ ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಡ್ರಗ್ಸ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅನೇಕ ಅರ್ಜಿಗಳನ್ನು ಬರುತ್ತಿದ್ದವು ಎಂದು ಹೇಳಿರುವ ಅವರು, "ಹಲವಾರು ಕಾಲೇಜು ಉಪನ್ಯಾಸಕರು ಕೆಲವು ವಿದ್ಯಾರ್ಥಿಗಳ ವರ್ತನೆ ಮತ್ತು ನಡವಳಿಕೆಯ ಬದಲಾವಣೆಗಳ ಬಗ್ಗೆ ನನಗೆ ತಿಳಿಸಿದ್ದಾರೆ. ಮಂಗಳೂರಿನ ಇಬ್ಬರು ಉಪನ್ಯಾಸಕರು ಲಿಖಿತ ದೂರುಗಳನ್ನು ನೀಡಿದ್ದರು. ಅದನ್ನು ನಾನು ಗಂಭೀರವಾಗಿ ಪರಿಗಣಿಸಿ ಮಾದಕ ದ್ರವ್ಯ ಸೇವನೆಯ ವಿರುದ್ದ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳ ಸಭೆಯನ್ನು ಕರೆಯಲು ನಿರ್ಧರಿಸಿದ್ದೆ'' ಎಂದು ತಿಳಿಸಿದ್ದಾರೆ.
''2012 ರಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಮತ್ತು ಇತರ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು ಈ ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಕೂಡ ಭಾಗವಹಿಸಿದ್ದರು'' ಎಂದು ಅವರು ಹೇಳಿದ್ದಾರೆ. ಹಾಗೆಯೇ ''ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಮನೋವೈದ್ಯರನ್ನು ಭೇಟಿಯಾಗಿ ಈ ಬಗ್ಗೆ ಮಾದಕ ವ್ಯಸನವನ್ನು ತೊಡೆದುಹಾಕಲು ವಿವರವಾದ ಮಾಹಿತಿಯನ್ನು ಸಂಗ್ರಹ ಮಾಡಿದ್ದೆ'' ಎಂದು ಕೂಡಾ ಹೇಳಿದ್ದಾರೆ.
"ನಾನು ಸುಮಾರು 17 ಅಂಶಗಳನ್ನು ಒಳಗೊಂಡ ವಿವರವಾದ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದೆ. ಆರಂಭದಲ್ಲಿ ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಂಡಿದ್ದು ಆದರೆ ಬಳಿಕ ಸರ್ಕಾರ ಈ ಸಮಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿಲ್ಲ'' ಎಂದು ಹೇಳಿದ್ದಾರೆ.
ಡ್ರಗ್ಸ್ ದಂಧೆಯು ಭಯೋತ್ಪಾದನೆ ಮತ್ತು ನಕಲಿ ಕರೆನ್ಸಿ ದಂಧೆಯಷ್ಟೇ ಅಪಾಯಕಾರಿ ಮತ್ತು ಮಾರಕವಾಗಿದೆ ಎಂದು ಹೇಳಿರುವ ಭಟ್ ಅವರು, "ಇದರ ಹಿಂದೆ ಪ್ರಭಾವಶಾಲಿ ಮಾಫಿಯಾ ಇದೆ, ಇದು ಯುವ ಪೀಳಿಗೆಯನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಡ್ರಗ್ಸ್ ದಂಧೆಯಿಂದ ದೊರೆಯುವ ಹಣವನ್ನು ಸಾಮಾಜ ವಿರೋಧಿ ಕೃತ್ಯಗಳಿಗೆ ಬಳಸಲಾಗುತ್ತದೆ. ಸಮಸ್ಯೆಯನ್ನು ಪರಿಹರಿಸಲು ದೊಡ್ಡ ಪ್ರಮಾಣದ ಕಾರ್ಯಾಚರಣೆಯ ಅಗತ್ಯವಿದೆ" ಎಂದು ಅವರು ಪ್ರತಿಪಾದಿಸಿದರು.