ಬಳ್ಳಾರಿ, ಮೇ 03: ಕರ್ನಾಟಕದಲ್ಲಿರುವುದು ಸಿದ್ದ-ಸೀದಾ ರುಪಯ್ಯಾ ಸರ್ಕಾರ, ಈ ಸರ್ಕಾರ ರಾಜ್ಯವನ್ನು ಸಾಲದ ಭಾದೆಯಿಂದ ನಲುಗುವಂತೆ ಮಾಡಿದೆ ಎಂದು, ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಳ್ಳಾರಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ರೂಪಾಯಿ ಸರ್ಕಾರ ಎಂದು ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪಕ್ಷವೂ ಮುಸ್ಲಿಂ, ದಲಿತರನ್ನು ರಾಷ್ಟ್ರಪತಿ, ಚಹಾ ಮಾರುವನನ್ನು ಪ್ರಧಾನಿಯನ್ನಾಗಿ ಮಾಡಿದ್ದು ಎಲ್ಲಾ ವರ್ಗದವರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಕರ್ನಾಟಕವೂ ಪ್ರಗತಿಯ ಹಾದಿ ಹಿಡಿಯಲಿದ್ದು, ಬಿಜೆಪಿಯನ್ನು ರಾಜ್ಯದ ಜನರನ್ನು ಆಶೀರ್ವಾದಿಸಬೇಕೆಂದು ಪ್ರಧಾನಿ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿಯ ಬಗ್ಗೆ ಕಾಂಗ್ರೆಸ್ ಕೇವಲ ಅಪ ಪ್ರಚಾರ ಮಾಡುತ್ತಿದೆ. ಬಳ್ಳಾರಿಯನ್ನು ಕಳ್ಳರ ಲೂಟಿಕೋರರ ಪ್ರದೇಶ ಎಂದು ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದೆ, ಇದು ಇಲ್ಲಿನ ಜನರಿಗೆ ಮಾಡುವ ಅವಮಾನ ಎಂದು ನರೇಂದ್ರ ಮೋದಿ ಅವರು ಬಳ್ಳಾರಿ ಜನತೆಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದರು. ತುಂಗಭದ್ರಾ ನದಿಯ ಹೂಳೆತ್ತಲು ಕೂಡಾ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆದರೆ, ಚುನಾವಣೆ ಸಮೀಪಿಸುತ್ತಿದ್ದಾಗ ಸಣ್ಣ ಪುಟ್ಟ ಚೆಕ್ ಡ್ಯಾಂ ನಿರ್ಮಿಸುವ ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದರು
ಬಳ್ಳ್ರಾರಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭ ಸೋನಿಯಾಗಾಂಧಿ 3 ಸಾವಿರ ಕೋಟಿ ರೂಪಾಯಿ ಪ್ಯಾಕೆಜ್ ಕೊಡುವುದಾಗಿ ಘೋಷಿಸಿದ್ದರು ಆದರೆ ಅವರು ಗೆದ್ದ ನಂತರ ಬಳ್ಳಾರಿ ಹಾಗೂ 3 ಸಾವಿರ ಕೋಟಿ ರೂಪಾಯಿ ಪ್ಯಾಕೆಜ್ ನ್ನು ಮರೆತರು ಎಂದು ಕಿಡಿಕಾರಿದರು.