ಮಂಗಳೂರು, ಸೆ 02 (DaijiworldNews/PY): ಮಂಗಳೂರಿನ ರಸ್ತೆಗಳು ಗುಂಡಿಗಳಿಂದ ಮಾರ್ಪಟ್ಟಿದ್ದು, ಈ ವಿಷಯದ ಬಗ್ಗೆ ಸಾರ್ವಜನಿಕರು ಟೀಕೆ ಮಾಡುತ್ತಿದ್ದಾರೆ. ಜನರು ಇಂತಹ ಗುಂಡಿಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕ ರಸ್ತೆಗಳನ್ನು ಅಭಿವೃದ್ದಿ ಪಡಿಸಿದ್ದಾರೆ. ಆದರೆ, ಸರ್ವಿಸ್ ರಸ್ತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಿಸದೇ ಇದ್ದ ಕಾರಣ ಇಂತಹ ಕರುಣಾಜನಕ ಸ್ಥಿತಿ ಎದುರಾಗಿದೆ.


ಈ ನಡುವೆ, ಶೈಕ್ಷಣಿಕ ಸಲಹೆಗಾರರಾದ ರಾಧಿಕ ಧೀಮಂತ್ ಅವರು ಸೆ.1ರ ಮಂಗಳವಾರದಂದು ಓಣಂ ಆಚರಿಸುವ ಮೂಲಕ ಪಂಪ್ವೆಲ್ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡಿದ್ದಾರೆ. ಪಂಪ್ವೆಲ್ ಫ್ಲೈಓವರ್ ಸಂಪೂರ್ಣವಾಗಲು ಹತ್ತು ವರ್ಷಗಳು ಬೇಕಾಯಿತು. ಇದು ಸಂಪೂರ್ಣಗೊಂಡ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಸರ್ವಿಸ್ ರಸ್ತೆಗಳು ಗುಂಡಿಗಳಿಂದ ಕೂಡಿದೆ.
ದಾಯ್ಜಿವಲ್ಡ್ನೊಂದಿಗೆ ಮಾತನಾಡಿದ ರಾಧಿಕಾ ಧೀಮಂತ್ ಅವರು, ನಾವು ಪಂಪ್ವೆಲ್ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡುವ ಮೂಲಕ ಓಣಂ ಆಚರಿಸಿದೆವು. ನಾನು ಉದ್ಯೋಗಸ್ಥೆಯಾಗಿದ್ದು, ಈ ರಸ್ತೆಯಲ್ಲಿ ಸಾಕಷ್ಟು ಬಾರಿ ಪ್ರಯಾಣಿಸುತ್ತಿದ್ದೇನೆ. ಅಪಘಾತಗಳಿಗೆ ಕಾರಣವಾಗುವ ಹಲವಾರು ಗುಂಡಿಗಳನ್ನು ಗಮನಿಸಬಹುದಾಗಿದ್ದು, ಹಾಗೂ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಮುಖ್ಯ ರಸ್ತೆಯ ಅಭಿವೃದ್ದಿಯತ್ತ ಮಾತ್ರವೇ ಗಮನ ಹರಿಸುತ್ತಾರೆ. ಆದರೆ, ಸರ್ವಿಸ್ ರಸ್ತೆಗಳ ಸ್ಥಿತಿ ಏನು? ಈ ರಸ್ತೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಹಾಗೂ ನನ್ನ ಸ್ನೇಹಿತೆಯರು ಈ ರಸ್ತೆಯಲ್ಲಿ ಪೂಕಳಂ ಮಾಡುವ ಆಲೋಚನೆಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಶೈಕ್ಷಣಿಕ ಸಲಹೆಗಾರ ರಾಧಿಕಾ ಧೀಮಂತ್ ಸುವರ್ಣ ಅವರ ಸ್ನೇಹಿತರಾದ ಯುವಿಕಾ, ಸುಪ್ರಿತಾ ಹಾಗೂ ಮೇಕಪ್ ಕಲಾವಿದ ನೆಲೋಫರ್ ಇದ್ದರು.