ಕಾಸರಗೋಡು, ಸೆ. 02 (DaijiworldNews/SM): ಉದ್ಯೋಗಕ್ಕಾಗಿ ಕಾಸರಗೋಡಿನಿಂದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ತೆರಳುವರಿಗೆ ಯಾವುದೇ ಅಡ್ಡಿ ಇಲ್ಲ. ಪಾಸ್, ನೋಂದಣಿ ನಡೆಸುವ ಅಗತ್ಯ ಇಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ.

ಅವರು ಬುಧವಾರ ನಡೆದ ಕೊರೋನ ಸಲಹಾ ಸಮಿತಿ ಆನ್ ಲೈನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿದವರಿಗೆ ರಾಷ್ಟೀಯ ಹೆದ್ದಾರಿ 66 ಅಲ್ಲದೆ ಸಂಚಾರಕ್ಕೆ ಮುಕ್ತಗೊಳಿಸಲಾದ ರಸ್ತೆಗಳ ಮೂಲಕ ಸಂಚರಿಸಲು ಅಡ್ಡಿಯಿಲ್ಲ ಎಂದು ತಿಳಿಸಿದರು.
ಕರ್ನಾಕಟದಲ್ಲೇ ನೆಲೆಸಿ ಕಾಸರಗೋಡು ಜಿಲ್ಲೆಗೆ ದಿನಂಪ್ರತಿ ಆಗಮಿಸುವವರು 21 ದಿನಗಳಿಗೊಮ್ಮೆ ಆಂಟಿಜನ್ ತಪಾಸಣೆ ನಡೆಸಿ, ಕೋವಿಡ್ ಜಾಗೃತಾ ಪೋರ್ಟಲ್ ನಲ್ಲಿ ನೋಂದಣಿ ಮಾಡಬೇಕು. ಇವರು ತಲಪಾಡಿ ಅಲ್ಲದೆ ಜಾಲ್ಸೂರು, ಪೆರ್ಲ, ಪಾಣತ್ತೂರು, ಮಾಣಿಮೂಲೆ-ಬಂದಡ್ಕ ರಸ್ತೆ ಮೂಲಕವೂ ಕರ್ನಾಟಕಕ್ಕೆ ಸಂಚಾರಿಸಬಹುದು.
ಸರಕು ವಾಹನಗಳ ಸಹಿತ ಇತರ ವಾಹನಗಳಿಗೆ ಈ ರಸ್ತೆಗಳಲ್ಲಿ ಯಾವುದೇ ಸಂಚಾರಕ್ಕೆ ಅಡ್ಡಿಯಾಗದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೇಂದ್ರ ಅರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ಆದೇಶದಂತೆ 14 ದಿನಗಳ ಕ್ವಾರಂಟೈನ್ ಅನಿವಾರ್ಯ. ಕೇಂದ್ರ ಸರಕಾರ ಘೋಷಿಸಿರುವ ಅನ್ ಲಾಕ್ 4 ಬಗ್ಗೆ ರಾಜ್ಯ ಸರಕಾರದ ಆದೇಶವೂ ಲಭಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತುರ್ತು ಅಗತ್ಯಕ್ಕೆ ಕರ್ನಾಟಕಕ್ಕೆ ತೆರಳಿ 24 ಗಂಟೆಯೊಳಗೆ ಮರಳುವವರಿಗೆ ಕ್ವಾರಂಟೈನ್ ಅಗತ್ಯ ಇಲ್ಲ. ಗಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವವರಿಗೆ ಗುರುತು ಚೀಟಿ ತೋರಿಸಿ ತೆರಳಬಹುದಾಗಿದೆ. ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಡಿ ಪ್ರದೇಶದ ಕೇರಳ-ಕರ್ನಾಟಕದ ಜನಪ್ರತಿನಿಧಿಗಳು ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಳ್ಳುವರು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.