ಪಡುಬಿದ್ರಿ, ಸೆ. 02 (DaijiworldNews/SM): ಇಲ್ಲಿನ ಹೆಜಮಾಡಿ ಗ್ರಾಮ ಅಯ್ಯಪ್ಪ ನಗರದ ಗರಡಿಯ ಬಳಿ ನಡೆದ ಹಿಟ್ ಆಂಡ್ ರನ್ ಪ್ರಕರಣವೊಂದಕ್ಕೆ ಸಂಬಂಧಿಸಿ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುರೇಶ್ ಗೌಡ(60) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಹೆಜಮಾಡಿ ಗ್ರಾಮ ಅಯ್ಯಪ್ಪ ನಗರದ ಗರಡಿಯ ಬಳಿ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯ ಪಕ್ಕದಲ್ಲಿ ಸುರೇಶ್ ಗೌಡ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅತಿಯಾದ ವೇಗದಲ್ಲಿ ಬಂದ ಕಾರು ಸುರೇಶ್ ಅವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.
ಘಟನೆಯಲ್ಲಿ ಸುರೇಶ್ ಗೌಡರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಮೂಲ್ಕಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದ್ದು, ತನಿಖೆ ಮುನ್ನಡೆಸಲಾಗಿದೆ.