ಕೋಟ, ಸೆ 03 (DaijiworldNews/PY): ಕೋಡಿ ಕನ್ಯಾನದಿಂದ ಕೋಟ ಪಡುಕರೆ ರಸ್ತೆಗಳ ಅವ್ಯವಸ್ಥೆಯ ಕುರಿತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಹಾಗೂ ಶೀಘ್ರಗತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಆಗ್ರಹಿಸಿ ಸ್ಥಳೀಯ ಹೋರಾಟ ಸಮಿತಿ ನೀಡಿದ್ದ ಪ್ರತಿಭಟನಾ ಕರೆ ಹಿನ್ನಲೆಯಲ್ಲಿ ಗುರುವಾರ ಕೋಟ ತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆ ಸಿ.ಎ ಬ್ಯಾಂಕ್ ಹತ್ತಿರ ಬೃಹತ್ ಪ್ರತಿಭಟನೆ ರಸ್ತೆ ತಡೆ, ಚುನಾವಣಾ ಬಹಿಷ್ಕಾರ ಹಮ್ಮಿಕೊಂಡಿತು.

















ಹೋರಾಟ ಸಮಿತಿಯ ಪ್ರಮುಖ ವಿವೇಕ್ ಸುವರ್ಣ ಮಾತನಾಡಿ, ಹಲವು ವರ್ಷಗಳಿಂದ ಈ ರಸ್ತೆಯ ಅವ್ಯವಸ್ಥೆಯ ಕುರಿತು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ವಾಹನ ದಟ್ಟನೆ, ಜನಸಾಮಾನ್ಯರಿಗೆ ಅತಿಯಾಗಿ ಬಳಕೆಯಾಗುತ್ತಿದ್ದು, ಗರ್ಭಿಣಿಯರನ್ನು ಕರೆದೊಯ್ಯಲು ಕಷ್ಟಕರ ಸನ್ನಿವೇಶ, ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ಸಂಚರಿಸಲು ಹಾಗೇ ಹಲವಾರು ಅಪಘಾತಗಳು ಈ ರಸ್ತೆಯ ಕಣಿವೆಗಳಿಂದ ಸೃಷ್ಠಿಯಾಗಿವೆ. ಪ್ರತಿಯೊರ್ವನಿಗೂ ತಾಳ್ಮೆ ಇರುತ್ತದೆ. ಆದರೆ ಈ ರೀತಿ ಪರೀಕ್ಷೆ ಸಲ್ಲ. ಶೀಘ್ರಗತಿಯಲ್ಲಿ ಇದಕ್ಕೊಂದು ಮುಕ್ತಿ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೊರೊನಾ ಹಿನ್ನೆಲೆ ಬೃಹತ್ ಪ್ರತಿಭಟನೆಗೆ ಜಿಲ್ಲಾಡಳಿತ ನಿಷೇಧದ ಸುತ್ತೋಲೆ ಅಡ್ಡಿಮಾಡಿತ್ತಾದರೂ ಬೃಹತ್ ಪ್ರತಿಭಟನೆ ಕಡಿವಾಣ ಹಾಕಲು ಕೋಟ ಪೋಲಿಸ್ ಎಸ್.ಐ ಸಂತೋಷ್ ಬಿ.ಪಿ ನೇತೃತ್ವದಲ್ಲಿ ಸರ್ಪಗಾವಲು ನಿಯೋಜಿಸಲಾಗಿತ್ತು. ಹೆಚ್ಚಿನ ಜನ ಸೇರದಂತೆ ಹಾಗೂ ರಸ್ತೆ ತಡೆ ನಡೆಸದಂತೆ ಪೋಲೀಸ್ ಇಲಾಖೆ ಎಚ್ಚರಿಕೆ ವಹಿಸಿತು.
ಪ್ರತಿಭಟನಾ ಕಾವು ಎರುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಕೊರೊನಾ ಹಿನ್ನಲೆ ಇದ್ದು, ಈ ರೀತಿ ಪ್ರತಿಭಟನಾ ನಡೆಸುವುದು ಎಷ್ಟು ಸೂಕ್ತ, ಸರಕಾರದ ಸುತ್ತೋಲೆಯನ್ನು ಗೌರವಿಸಿ ಹಾಗೇ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ, ಕೋಟ ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ದಿನೇಶ್ ಬಂಗೇರ, ರತ್ನಾಕರ ಶ್ರೀಯಾನ್, ದಾವುದ್ ಇಬ್ರಾಹಿಂ, ಹೋರಾಟ ಸಮಿತಿಯ ಪ್ರಮುಖರಾದ ಇಬ್ರಾಹಿಂ ಸಾಹೇಬ್, ಸ್ಥಳೀಯ ಸಂಘಟನೆಗಳಾದ ವಿನಾಯಕ ಫ್ರೆಂಡ್ಸ್ ಪಡುಕರೆ, ಅರಮ ವಿಜಯ ಸ್ಪೋರ್ಟ್ಸ್ ಕ್ಲಬ್, ಪಡುಕರೆ ಫ್ರೆಂಡ್ಸ್ ಪಡುಕರೆ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ, ನಜಾದ್ ಫ್ರೆಂಡ್ಸ್ ಮತ್ತಿತರ ಸ್ಥಳೀಯ ಸಂಘಸಂಸ್ಥೆಗಳು ಭಾಗವಹಿಸಿದ್ದವು.