ಮಂಗಳೂರು, ಸೆ. 03 (DaijiworldNews/SM): ಹೃದಯಾ ಕಾಯಿಲೆಯಿಂದ ಬಳಲುತ್ತಿದ್ದ ಬಂದರು ಠಾಣಾ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ದಿನೇಶ್(44) ಮೃತಪಟ್ಟ ಪೊಲೀಸ್ ಸಿಬ್ಬಂದಿ.

ಲಾಕ್ ಡೌನ್ ಸಂದರ್ಭ ಅವರಿಗೆ ಮೊದಲ ಬಾರಿಗೆ ಹೃದಯಾಘಾತ ಸಂಭವಿಸಿತ್ತು. ಅದರ ನಂತರ ಅವರು ರಜೆಯಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಮತ್ತೆ ಸೆಪ್ಟೆಂಬರ್ 3ರ ಗುರುವಾರದಂದು ಅವರಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ಹಿಂದೆ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಕರ್ತವ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಉತ್ತಮ ಸೇವಾ ದಾಖಲೆ ಹೊಂದಿದ್ದರು. ಬಂದರು ಪೊಲೀಸ್ ಠಾಣೆಗೆ ವರ್ಗಾವಣೆಯಾದ ನಂತರ ಅವರು ತಮ್ಮ ಸ್ನೇಹಪರ ಸ್ವಭಾವ ಮತ್ತು ದಕ್ಷ ಸೇವೆಯಿಂದ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದ್ದರು.