ಮಂಗಳೂರು, ಮೇ 04: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ನೆರವು ನೀಡಲಾಗಿದೆ.
ಉರ್ವಸ್ಟೋರ್ ನಿವಾಸಿ ಸದಾಶಿವ ಪೂಜಾರಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದವರು. ಬಸ್ಸಿನಲ್ಲಿ ಚಾಲಕ ವೃತ್ತಿ ನಡೆಸುತ್ತಿದ್ದ ಇವರು ಕಳೆದ ಕೆಲ ವರುಷಗಳಿಂದ ಕಿಡ್ನಿ ವೈಫಲ್ಯ ಮತ್ತು ಪಿಸ್ತುಲ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಇವರ ನೆರವಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ನಿಂತಿದ್ದು, 50 ಸಾವಿರ ರೂಪಾಯಿ ನೆರವು ಒದಗಿಸಿದ್ದಾರೆ. ಬೋಳ ಶ್ರೀನಿವಾಸ ಕಾಮತ್ ಕಾರ್ಕಳ, ವಾಸುದೇವ ಕಾಮತ್ ಮಂಗಳೂರು, ಆರ್.ಜೆ. ರಶ್ಮಿ ಜಂಟಿಯಾಗಿ ನೆರವಿನ ಚೆಕ್ ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಹಲವಾರು ಬಡ ಕುಟುಂಬಗಳು ಸಹಾಯ ಕೋರಿ ಬರುತ್ತಿದ್ದಾರೆ. ನಮ್ಮ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸದಸ್ಯರು, ದಾನಿಗಳು ಕೊಡ ಮಾಡಿದ ನಿಧಿಯನ್ನು ಒಟ್ಟು ಸೇರಿಸಿ ಬಡ ಕುಟುಂಗಳಿಗೆ ನೆರವು ನೀಡುತ್ತಿದ್ದೇವೆ. ಕಳೆದ ಕೆಲ ವರುಷಗಳಿಂದ 70 ಲಕ್ಷಕ್ಕೂ ಮಿಕ್ಕಿ ಧನ ಸಹಾಯ ವಿತರಿಸಲಾಗಿದೆ ಎಂದು ತಿಳಿಸಿದರು.
ಆರ್ ಜೆ ರಶ್ಮಿ ಮಾತನಾಡಿ, ಮೂರು ವರುಷದಿಂದ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಮಾಡುತ್ತಿದೆ. ಇವರ ಈ ಕೆಲಸ ಬೇರೆ ಸಂಘ ಸಂಸ್ಥೆಗಳಿಗೆ ಮಾದರಿ. ಇನ್ನಷ್ಟು ಬಡ ಜನರ ಸೇವೆ ಮಾಡಲು ಸಂಸ್ಥೆಗೆ ಸಹಾಯಹಸ್ತ ಸಿಗಲಿ ಎಂದು ಹಾರೈಸಿದರು.
ನೆರವು ಪಡೆದ ಸದಾಶಿವ ಪೂಜಾರಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.