ಮಂಗಳೂರು, ಮೇ 04; ತಾಲೂಕಿನ ಮಲ್ಲೂರು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವ ಕಡ್ಸಲೆ ನೆಲಕ್ಕೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಂಗಳೂರು ಉತ್ತರ ವಿಧಾನಸಭಾ ಶಾಸಕ ಮೊಯ್ದೀನ್ ಬಾವಾ ಅವರಿಗೆ ಮಲ್ಲೂರು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ಮಾಲೆ ಹಾಕಿದ್ದು, ಈ ಹಿನ್ನೆಲೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ದೈವ ಕಡ್ಸಲೆ ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸಲು ಮೂಲ ಕಾರಣ ಎಂದು ತಿಳಿದುಬಂದಿದೆ.
ಕಳೆದ ಏಪ್ರಿಲ್ 30 ನೇ ತಾರೀಖಿನಂದು ಮಲ್ಲೂರು ದೈವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಧೂಮಾವತಿ-ಬಂಟ ದೈವಗಳ ನೇಮೋತ್ಸವ ನಡೆದಿತ್ತು. ಈ ಹಿನ್ನೆಲೆ ಶಾಸಕ ಮೊಯ್ದೀನ್ ಬಾವಾ ದೈವಸ್ಥಾನಕ್ಕೆ ಬಂದಿದ್ದರು. ಶಾಸಕರು ಆಗಮಿಸುವ ವೇಳೆ ದೈವಸ್ಥಾನದಲ್ಲಿ ದೈವಕ್ಕೆ ಗಗ್ಗರ ಸೇವೆ ನಡೆಯುತ್ತಿತ್ತು. ಈ ಸಂದರ್ಭ ಅಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಶಾಸಕರನ್ನು ಗೌರವದಿಂದ ಬರಮಾಡಿಕೊಂಡಿದ್ದರು.
ಈ ವೇಳೆ ದೈವವು ಕೈ ಸನ್ನೆ ಮೂಲಕ ಶಾಸಕರಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಬೇಕು. ಗ್ರಾಮದ ಈಶ್ವರ ದೇವಾಲಯದಲ್ಲಿ ಧರ್ಮ ಕಾರ್ಯ ನಡೆಸಿ ಕ್ಷೇತ್ರವನ್ನು ಬೆಳಗಿಸಬೇಕು ಎಂದು ಸೂಚನೆ ನೀಡಿದ್ದು, ಇದಕ್ಕೆ ಶಾಸಕರು ಒಪ್ಪಿಗೆಯನ್ನು ನೀಡಿದ್ದರು. ಮಾತ್ರವಲ್ಲ, ದೈವಸ್ಥಾನದ ಮುಖ್ಯಸ್ಥರಾದ ಮಂಜಯ್ಯ ಶೆಟ್ರ ಬಳಿ ಶಾಸಕರಿಗೆ ಮಾಲೆ ಹಾಕಲು ದೈವ ಆಜ್ಞೆ ಮಾಡಿದ್ದು, ಅದರಂತೆ ಮಂಜಯ್ಯ ಶೆಟ್ಟಿ ಶಾಸಕರಿಗೆ ಮಾಲೆ ಹಾಕಿದ್ದರು. ಆದರೆ ಇದಕ್ಕೆ ಗ್ರಾಮದ ಕೆಲ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಮಾಲೆ ಹಾಕಿದ್ದರಿಂದ ಯುವಕರು ಸಿಟ್ಟುಗೊಂಡು ನೇಮೋತ್ಸವ ನಡೆಯುತ್ತಿದ್ದ ವೇಳೆ ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ, ಯುವಕರು ಮಂಜಯ್ಯ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ದೈವದ ಅಣತಿ ಮೀರಿದರು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ದೈವ ಆಕ್ರೋಶಭರಿತವಾಗಿ ಮಂಚದಲ್ಲಿದ್ದ ಕಡ್ಸಲೆಯನ್ನು ತೆಗೆದು ಮೂರು ಬಾರಿ ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಸಾಮಾಜಿಕ ಜಾಲದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ದೈವವು ಕಡ್ಸಲೆ ನೆಲಕ್ಕೆ ಊರಿದ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ದೈವ ಕಡ್ಸಲೆ ನೆಲಕ್ಕೆ ಊರಿದ ಘಟನೆ ಊರಿಗೆ ದೊಡ್ಡ ಅಘಾತ ನೀಡಿದೆ. ದೈವಗಳು ಕಡ್ಸಲೆ ನೆಲಕ್ಕೆ ಊರಿದರೆ ತೊಂದರೆ ತಪ್ಪಿದ್ದಲ್ಲ. ದೈವಗಳು ಎಚ್ಚರಿಕೆ ನೀಡುತ್ತವೆಯೇ ಹೊರತು ಕಡ್ಸಲೆ ನೆಲಕ್ಕೆ ಊರುವುದಿಲ್ಲ. ಇದೀಗ ಕಡ್ಸಲೆ ನೆಲಕ್ಕೆ ಊರಿದ್ದರಿಂದ ಮುಂದಿನ ದಿನಗಳಲ್ಲಿ ಏನಾದರೂ ಹಾನಿ ಉಂಟಾಗುವುದು ಗ್ಯಾರಂಟಿ ಎಂದು ಭಕ್ತರು ಆಡಿಕೊಳ್ಳತೊಡಗಿದ್ದಾರೆ.
ಈ ಘಟನೆ ಹಿನ್ನೆಲೆ ಮುಂದಿನ ದಿನಗಳಲ್ಲಿ ಊರವರು ಸೇರಿ ಪರಿಹಾರ ಕಾರ್ಯ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.