ಪುತ್ತೂರು, ಸೆ. 04 (DaijiworldNews/MB) : ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹರಳುಗಳನ್ನು ಬೆಂಗಳೂರಿನ ಅಂಗಡಿಯೊಂದಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ತಾಲ್ಲೂಕಿನ ಬೆಲಂದೂರು ಮತ್ತು ಬಲ್ನಾಡು ಗ್ರಾಮಗಳ ಮೂವರನ್ನು ಸೆಪ್ಟೆಂಬರ್ 1 ರಂದು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಲ್ನಾಡು ಗ್ರಾಮದ ರವಿಕುಮಾರ್, ಬೆಲಂದೂರು ಗ್ರಾಮದ ಸುಧೀರ್ ಮತ್ತು ಬೆಳ್ತಂಗಡಿ ಯ ಪ್ರವೀಣ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಒಂಬತ್ತು ಅಪರೂಪದ ವಜ್ರದ ಹರಳುಗಳು, ಅಮೂಲ್ಯ ರತ್ನಗಳನ್ನು ಹಾಗೂ ಮಾರಾಟಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಜ್ರ ಮಾರಾಟ ಮಾಡಲು ಯತ್ನಿಸಿದವರು, ಸರಿಯಾದ ದಾಖಲೆಗಳನ್ನು ಹೊಂದಿರಲಿಲ್ಲ. ಆದ್ದ ಕಾರಣ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಪೊಲೀಸರು ಈ ವಜ್ರದ ನಿಜವಾದ ಮಾಲೀಕರು ಯಾರು ಎಂದು ಪತ್ತೆ ಹಚ್ಚುತ್ತಿದ್ದಾರೆ.
ಆರೋಪಿಗಳಲ್ಲಿ ಒರ್ವನು ವಜ್ರಗಳನ್ನು ಸಾಗಿಸಲು ಸಂಬಂಧಿಕರ ಕಾರನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಕಳೆದ ಎರಡು ದಿನಗಳಿಂದ ಆರೋಪಿ ಹಾಗೂ ಅವರ ಕಾರು ನಾಪತ್ತೆಯಾದ ಕಾರಣ ಸಂಬಂಧಿಕರು ಆತಂಕಕ್ಕೊಳಗಾಗಿದ್ದರು ಎನ್ನಲಾಗಿದೆ. ಈಗ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು ವಜ್ರಗಳ ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿದೆ.