ಮಂಗಳೂರು, ಸೆ 04 (DaijiworldNews/PY): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರು ಸಾವನ್ನಪ್ಪುವ ಸಂಖ್ಯೆ ಹೆಚ್ಚುತ್ತಿದೆ. ಈವರೆಗೆ 381 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ವರದಿಯೊಂದರ ಪ್ರಕಾರವಾಗಿ ಈ ಮೃತ ಸೋಂಕಿತರ ಪೈಕಿ ಶೇ.95.3 ಜನರಿಗೆ ಇತರೆ ಖಾಯಿಲೆಯೂ ಕೂಡಾ ಇದ್ದು ಹೆಚ್ಚಿನವರು 60ರಿಂದ 80 ವರ್ಷದವರಾಗಿದ್ದಾರೆ.

ಈ ಹಿಂದೆ ದಾಯ್ಜಿವಲ್ಡ್ ವಾಹಿನಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್ ಅವರು, ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಂದು ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 60 - 70 ವಯಸ್ಸಿನವರಾಗಿದ್ದಾರೆ. ಹಾಗೆಯೇ ಈ ಪೈಕಿ ಕಿಡ್ನಿ, ಲಿವರ್, ಶ್ವಾಸಕೋಶ ಸಮಸ್ಯೆ ಇರುವವರು, ಹೃದಯಾಘಾತವಾಗಿರುವವರು, ಬ್ಲಡ್ ಕ್ಯಾನ್ಸರ್ ಆಗಿರುವವವರು ಕೂಡಾ ಇದ್ದಾರೆ. ಹಾಗಾಗಿ ಕೊರೊನಾ ಎನ್ನುವುದು ದ್ವಿತೀಯ ಕಾರಣವಾಗುತ್ತದೆ. ಪ್ರಾಥಮಿಕ ಕಾರಣ ಬೇರೆ ಆಗಿರುತ್ತದೆ. ಕ್ಯಾನ್ಸರ್ನ ಕೊನೆಯ ಹಂತದಲ್ಲಿರುವ ವ್ಯಕ್ತಿಗೆ ಕೊರೊನಾ ಬಂದಿಲ್ಲದಿದ್ದರೂ ಸಾವನ್ನಪ್ಪುವುದು ಖಂಡಿತ. ಕ್ಯಾನ್ಸರ್ ಸಾವಿಗೆ ಪ್ರಾಥಮಿಕ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಕೊರೊನಾ ಎಂದು ನಾಮಕರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು.
ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಅಂಕಿ ಅಂಶದ ವಿಶ್ಲೇಷಣೆಯೊಂದರ ಪ್ರಕಾರವಾಗಿ ಜಿಲ್ಲೆಯಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಪೈಕಿ ಹೆಚ್ಚಿನವರಿಗೆ ಇತರೆ ಖಾಯಿಲೆಯೂ ಕೂಡಾ ಇತ್ತು ಎಂದು ತಿಳಿದು ಬಂದಿದೆ.
2020ರ ಮಾರ್ಚ್ 25ರಿಂದ 2020ರ ಸೆಪ್ಟೆಂಬರ್ 2ರವರೆಗಿನ ಅಂಕಿ ಅಂಶದಲ್ಲಿ, ಮಂಗಳೂರಿನಲ್ಲಿ ಒಟ್ಟು 218 (ಶೇ.57.21) ಮಂದಿ ಮೃತಪಟ್ಟಿದ್ದಾರೆ. ಬಂಟ್ವಾಳದಲ್ಲಿ 46 (ಶೇ.12.08), ಬೆಳ್ತಂಗಡಿಯಲ್ಲಿ 11 ಮಂದಿ (ಶೇ.2.88), ಪುತ್ತೂರಿನಲ್ಲಿ ಒಟ್ಟು 23 ಮಂದಿ (ಶೇ.6.03), ಸುಳ್ಯ ತಾಲೂಕಿನಲ್ಲಿ 4 ಮಂದಿ (ಶೇ.1.04) ಇನ್ನು ಉಳಿದ ತಾಲೂಕಿನಲ್ಲಿ 79 ಮಂದಿ (ಶೇ.20.73) ಸಾವನ್ನಪ್ಪಿದ್ದಾರೆ. ಈ ಪೈಕಿ ಮಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಪ್ರಮಾಣ ಹೆಚ್ಚಿದೆ.
ಮಂಗಳೂರಿನಲ್ಲಿ ಒಟ್ಟು 8988 ಕೊರೊನಾ ಪ್ರಕರಣಗಳಿವೆ. ಈ ಪೈಕಿ 218 ಮಂದಿ ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ.2.42ರಷ್ಟಿದೆ. ಬಂಟ್ವಾಳ ತಾಲೂಕಿನಲ್ಲಿ 1772 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 46 ಮಂದಿ ಸಾವನ್ನಪ್ಪಿದ್ದು, ಮರಣ ಪ್ರಮಾಣ ಶೇ.2.59 ಇದೆ. ಬೆಳ್ತಂಗಡಿಯಲ್ಲಿ ಒಟ್ಟು 856 ಕೊರೊನಾ ಪ್ರಕರಣಗಳಿವೆ. ಈ ಪೈಕಿ 11 ಮಂದಿ ಮೃತಪಟ್ಟಿದ್ದು, ಶೇ.1.28ರಷ್ಟಿದೆ. ಪುತ್ತೂರಿನಲ್ಲಿ 358 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 23 ಮಂದಿ ಸಾವನ್ನಪ್ಪಿದ್ದು, ಮರಣ ಪ್ರಮಾಣ ಶೇ. 6.42ರಷ್ಟು ಇದೆ. ಇನ್ನು ಸುಳ್ಯ ತಾಲೂಕಿನಲ್ಲಿ 684 ಕೊರೊನಾ ಪ್ರಕರಣಗಳಿದ್ದು, ಈ ಪೈಕಿ 4 ಮಂದಿ ಮೃತಪಟ್ಟು, ಮರಣ ಪ್ರಮಾಣ ಶೇ.9.62ರಷ್ಟಿದೆ. ಈ ನಡುವೆ ಉಳಿದ ಜಿಲ್ಲೆಗಳಲ್ಲಿ 821 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 79 ಮಂದಿ ಸಾವನ್ನಪ್ಪಿದ್ದು, ಶೇ.9.62ರಷ್ಟು ಮರಣ ಪ್ರಮಾಣವನ್ನು ಹೊಂದಿದೆ.
ಕೊರೊನಾ ಸೋಂಕು ದೃಢಪಟ್ಟ ಪ್ರಕರಣದಲ್ಲಿ ಸುಮಾರು 277 (ಶೇ.73) ಮಂದಿ ಪುರುಷರಾಗಿದ್ದರೆ, ಉಳಿದ 104 (ಶೇ.27) ಮಂದಿ ಮಹಿಳೆಯರಾಗಿದ್ದಾರೆ. ಈ ಪೈಕಿ ಕೊರೊನಾ ದೃಢಪಟ್ಟವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದೆ.
0 - 20 ವಯಸ್ಸಿನ 4 ಮಂದಿ, 21 - 40 ವಯಸ್ಸಿನ 30 ಮಂದಿ, 41-60 ವಯಸ್ಸಿನ 132 ಮಂದಿ, 60-80 ವಯಸ್ಸಿನ 188 ಮಂದಿ ಹಾಗೂ 80 ವರ್ಷ ವಯಸ್ಸಿನ 27 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು ಈ ಪೈಕಿ ಹೆಚ್ಚು 60-80 ವರ್ಷ ವಯಸ್ಸಿನ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ದ.ಕ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಶೇ.57.21ರಷ್ಟು ಮಂದಿ ಕೊರೊನಾದಿಂದ ಸಾವನ್ನಪಿದ್ದು (ಜಿಲ್ಲೆಯಲ್ಲಿ ಒಟ್ಟು ಮರಣ ಪ್ರಮಾಣ ಶೇ.2.82ರಷ್ಟಿದೆ.). ಶೇ.72ಕ್ಕಿಂತ ಅಧಿಕ ಪುರುಷರು ಕೊರೊನಾದಿಂದ ಸಾವನ್ನಪ್ಪಿದ್ದರೆ, ಶೇ.49.3ರಷ್ಟು 60-80 ವರ್ಷ ವಯಸ್ಸಿನ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇತರ ಖಾಯಿಲೆಯಿಂದ ಶೇ.95.3 ಮಂದಿ ಸಾವನ್ನಪ್ಪಿದ್ದಾರೆ.