ಮಂಗಳೂರು, ಮೇ 04: ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು, ಬಡವರು ಮತ್ತಷ್ಟು ಬಡವರಾದರು ಎಂದು ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ದೂರಿದ್ದಾರೆ.
ಬೈಕಂಪಾಡಿಯ ಅಂಗರಗುಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನರೇಂದ್ರ ಮೋದಿಯವರ ಶ್ರೀಮಂತರ ಪರವಾದ ಆರ್ಥಿಕ ನೀತಿಗಳನ್ನು ನೋಡುತ್ತಿದ್ದೇವೆ. ಅದಕ್ಕೂ ಮುಂಚೆ ಮನಮೋಹನ್ ಸಿಂಗರ ಕಾಂಗ್ರೆಸ್ ಸರ್ಕಾರ ಅದಕ್ಕೆ ಮುನ್ನುಡಿ ಬರೆದಿತ್ತು. ಅವರು ಪರಿಚಯಿಸಿದ ಆರ್ಥಿಕ ನೀತಿಗಳಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು, ಬಡವರು ಮತ್ತಷ್ಟು ಬಡವರಾದರು. ಮೋದಿ ತಮ್ಮ ಸಂಕಟಗಳಿಗೆ ಪರಿಹಾರ ದೊರಕಿಸುತ್ತಾರೆಂದು ನಂಬಿದ ಜನ ಅವರಿಗೆ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಿದರು. ಆದರೆ ಆಗಿದ್ದೇ ಬೇರೆ ಎಂದು ಹೇಳಿದರು.
2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ನೋಟ್ ಬ್ಯಾನ್ ಪರಿಣಾಮವಾಗಿ 1 ಕೋಟಿಯಷ್ಟು ಜನ ಇರುವ ಉದ್ಯೋಗವನ್ನೇ ಕಳೆದುಕೊಂಡರು. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಯಲ್ಲೂ 15 ಲಕ್ಷ ಹಾಕುವ ಭರವಸೆ ನೀಡಿದ್ದರು. ಈಗ ಕಪ್ಪು ಹಣ ತರುವುದಿರಲಿ, ವಿಜಯ್ ಮಲ್ಯ, ನೀರವ್ ಮೋದಿಯಂಥ ಶ್ರೀಮಂತ ಉದ್ಯಮಿಗಳು ನಮ್ಮ ದೇಶದ ಬ್ಯಾಂಕುಗಳಲ್ಲಿರುವ ಹಣವನ್ನೇ ಗಂಟು ಕಟ್ಟಿಕೊಂಡು ದೇಶ ತೊರೆದು ಓಡಿ ಹೋಗುತ್ತಿದ್ದಾರೆ. ಇದು ಮೋದಿ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಮಿಕರಿಗಾಗಿ ಯಾವ ಹೋರಾಟವನ್ನೂ ನಡೆಸಿಲ್ಲ. ಬೀಡಿ ಕಟ್ಟುವ ತಾಯಂದಿರಿಗಾಗಿ ಕಮ್ಯುನಿಸ್ಟ್ ಪಕ್ಷ ಹಲವು ಹೋರಾಟಗಳನ್ನು ನಡೆಸಿದೆ. ಅವರ ಸೌಲಭ್ಯಗಳಿಗಾಗಿ ಬೇಡಿಕೆ ಇಟ್ಟು ನಡೆಸಿದ ಹೋರಾಟದಲ್ಲಿ ಕರಾವಳಿಯ ನೂರಾರು ಕಮ್ಯುನಿಸ್ಟ್ ಹೋರಾಟಗಾರರು ಸೆರೆವಾಸ ಅನುಭವಿಸಿದ್ದರು. ನಮ್ಮ ಹೋರಾಟದ ಫಲವಾಗಿ ಇಂದು ಬೀಡಿಕಟ್ಟುವ ತಾಯಂದಿರು ಸ್ವಲ್ಪವಾದರೂ ನೆಮ್ಮದಿಯಿಂದ ಉಸಿರಾಡುವ ಹಾಗೆ ಆಗಿದೆ. ಮುಂದಿನ ದಿನಗಳಲ್ಲಿಯೂ ನಾವು ಅವರೊಂದಿಗೆ, ಕಟ್ಟಡ ಕಾರ್ಮಿಕರೊಂದಿಗೆ ಇರುತ್ತೇವೆ, ಅವರಿಗಾಗಿ ಹೋರಾಡುತ್ತೇವೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಗ್ಗೆ ಮಾತನ್ನೇ ಆಡುವುದಿಲ್ಲ ಎಂದು ದೂರಿದರು.
ಬಿಜೆಪಿಯ ಕೋಮುವಾದದ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ನಮಗೆ ಮುಸಲ್ಮಾನರ ಮತ ಬೇಡ. ಅವರನ್ನು ಸೈಡಿಗೆ ಇಟ್ಟಿದ್ದೀವಿ ಎಂದು ನೇರವಾಗಿಯೇ ಹೇಳಿದ್ದಾರೆ. ಆದರೆ ಅದೇ ಈಶ್ವರಪ್ಪ ಮೊಯ್ದಿನ್ ಬಾವಾರ ಸಹೋದರರು, ಅತ್ಯಂತ ಶ್ರೀಮಂತರು ಆದ ಕರ್ನಿರೆ ಕುಟುಂಬದ ಮದುವೆಗೆ ಶ್ರೀರಾಮುಲು ಅವರೊಂದಿಗೆ ಬಂದು ಮದುವೆ ಬಿರಿಯಾನಿ ಉಂಡು ಹೋಗಿದ್ದಾರೆ. ಅವರಿಗೆ ಶ್ರೀಮಂತ ಬ್ಯಾರಿಗಳು ಆಗಬಹುದ. ಆದರೆ ಬಡವರ ಬಗ್ಗೆ ಮಾತ್ರ ತಾತ್ಸಾರ. ಅವರ ಧರ್ಮ ಶ್ರೀಮಂತರ ಧರ್ಮ. ಬಷೀರ್, ದೀಪಕ್ ರಾವ್, ಅಶ್ರಫ್ ಕುಳಾಯಿ, ಶರತ್ ಮಡಿವಾಳ ಹೀಗೆ ಕರಾವಳಿಯಲ್ಲಿ ಕೊಲೆಯಾಗಿ ಸತ್ತವರೆಲ್ಲ ಬಡವರ ಮನೆಯ ಮಕ್ಕಳು. ಅವರು ಬಡವರ ಮೇಲೆ ಬಡವರನ್ನೇ ಎತ್ತಿಕಟ್ಟುತ್ತಾರೆ ಎಂದು ಕಿಡಿ ಕಾರಿದರು.
ಬಿಜೆಪಿ ತನ್ನ ಕರಪತ್ರದಲ್ಲಿ ಅಮಾಯಕ ಕಬೀರ್ ನನ್ನು ಗೋಕಳ್ಳ ಎಂದು ಕರೆದಿದೆ. ಆತನ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡಿಸಿದ ಎಂ ಎಲ್ ಎ ಎಂದು ಮೊಯ್ದಿನ್ ಬಾವಾರನ್ನು ದೂರಿದೆ. ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾರಿಗೆ ಅದನ್ನು ಪ್ರಶ್ನಿಸುವ ದಮ್ ಇಲ್ಲ. ಕಬೀರನ ಅಮಾಯಕ ತಂದೆ-ತಾಯಿಯರು ಇದಕ್ಕೆ ಉತ್ತರಿಸಲಾಗದೆ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ನೇರವಾಗಿ ಆರೋಪ ಹೊರಿಸಿದಾಗಲೂ ಸುಮ್ಮನೆ ಕುಳಿತಿರುವ ನೀವೆಂಥ ಜನನಾಯಕ? ಎಂದು ಪ್ರಶ್ನಿಸಿದರು.
ಯುವಜನರಿಗಾಗಿ ಉದ್ಯೋಗ ಸೃಷ್ಟಿಸುವ ಬದಲು ಅವರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಲಾಗುತ್ತಿದೆ. ಯುವಜನರು ಮಾದಕ ದ್ರವ್ಯಗಳ ಜಾಲದಲ್ಲಿ ಸಿಲುಕುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಗಮನವನ್ನೇ ಹರಿಸುತ್ತಿಲ್ಲ. ಯುವಜನರು ಅವರು ನೀಡುವ ಆಮಿಶಗಳಿಗೆ ಬಲಿಯಾಗಬಾರದು. ಹಣಕ್ಕಾಗಿ ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳಬಾರದು ಎಂದು ಕರೆ ನೀಡಿದರು.
ಇದು ಕೋಮುಗಳ ನಡುವೆ ಸಂಘರ್ಷ ಅಲ್ಲ ಶ್ರೀಮಂತ ಹಾಗೂ ಬಡವರ ನಡುವಿನ ಸಂಘರ್ಷ. 10% ಇರುವ ಶ್ರೀಮಂತರ ಪರ ಅವರಿದ್ದರೆ, 90% ಇರುವ ಬಡವರ ಪರ ನಾವಿದ್ದೇವೆ. ಆದ್ದರಿಂದ ಜನಸಾಮಾನ್ಯರು ನಿಮ್ಮ ಜೊತೆ ಇರುವ ನಮಗೆ ಮತ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ವಿನಂತಿಸಿಕೊಂಡಿದ್ದಾರೆ.