ಕಾಸರಗೋಡು, ಸೆ. 04 (DaijiworldNews/SM): ಕ್ವಾರಂಟೈನ್ ನಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಆರೋಪಿಯನ್ನು ಜಾನುವಾರು ಕಳವು ನಡೆಸುತ್ತಿದ್ದಾಗ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಸರಗೋಡು ತೆಕ್ಕಿಲ್ ಮಾಂಗಾಡ್ ನ ರಂಶಾನ್ ಸೈನುದ್ದೀನ್(20)ನನ್ನು ಬದಿಯಡ್ಕ ಠಾಣಾ ವ್ಯಾಪ್ತಿಯಿಂದ ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಚಂಬಲ್ತಿಮಾರ್ ಎಂಬಲ್ಲಿ ಜಾನುವಾರು ಕಳವು ಮಾಡುತ್ತಿದ್ದಾಗ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ದನವನ್ನು ವ್ಯಾನ್ ನಲ್ಲಿ ಸಾಗಿಸುತ್ತಿತ್ತುವುದನ್ನು ಗಮನಿಸಿದ ನಾಗರಿಕರು ಸಂಶಯಗೊಂಡು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಠಾಣೆಗೆ ಕೊಂಡೊಯ್ದು ವಿಚಾರಣೆ ನಡೆಸಿದಾಗ ಕಳವು ನಡೆಸಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಪೊಯಿನಾಚಿ ಪೊನ್ನಡ್ಕದ ರಾಧಾಕೃಷ್ಣ ಎಂಬವರ ದನವನ್ನು ಕಳವುಗೈದು ಸಾಗಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಈತನ ಜೊತೆಗಿದ್ದ ಪೊವ್ವಲ್ ನ ಮುನೀರ್(30) ಎಂಬಾತನನ್ನು ಬಂಧಿಸಲಾಗಿದೆ. ಆಗಸ್ಟ್ 24ರಂದು ಬೆಳಿಗ್ಗೆ ಪರಾರಿಯಾಗಿದ್ದ.
ಕಣ್ಣೂರು ಎಡಕ್ಕಾಡ್ ಕ್ವಾರಂಟೈನ್ ಕೇಂದ್ರದಿಂದ ಕೆಲ ದಿನಗಳ ಹಿಂದೆ ಪರಾರಿಯಾಗಿ ಈತನನ್ನು ಹಿಡಿದು ಬಳಿಕ ಅಂಜರಕಂಡಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು.
ವಾಹನ ಕಳವು ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿರುವ ಈತನನ್ನು ಎಡಕ್ಕಾಡ್ ಪೊಲೀಸರು ಬಂಧಿಸಿ ಕ್ವಾರಂಟೈನ್ ನಲ್ಲಿರಿಸಿದ್ದರು. ಈ ನಡುವೆ ಈತ ತಪ್ಪಿಸಿಕೊಂಡಿದ್ದ. ಬಳಿಕ ಈತನನ್ನು ಚೆಮ್ನಾಡ್ ಸೇತುವೆ ಸಮೀಪದಿಂದ ಕಾಸರಗೋಡು ಪೊಲೀಸರು ಬಂಧಿಸಿ ಎಡಕ್ಕಾಡ್ ಪೊಲೀಸರಿಗೆ ಹಸ್ತಾಂತರಿಸಿದ್ದರು. ಆರೋಪಿಯನ್ನು ಅಂಜರಕಂಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿಗಾ ಕೇಂದ್ರದಲ್ಲಿರಿಸಲಾಗಿತ್ತು. ಈ ಕೇಂದ್ರದಿಂದಲೂ ಈತ ಪರಾರಿಯಾಗಿದ್ದ. ಈತನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಇನ್ನೊಂದು ಕಳವು ಪ್ರಕರಣದಲ್ಲಿ ಈತ ಸೆರೆ ಸಿಕ್ಕಿದ್ದಾನೆ.