ಮಂಗಳೂರು, ಸೆ. 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ 17 ಮಂದಿ ಕೇವಲ ಕೊರೊನಾ ಸೋಂಕಿನ ಕಾರಣದಿಂದಾಗಿಯೇ ಸಾವನಪ್ಪಿದ್ದಾರೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ದೈಜಿವರ್ಲ್ಡ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಶುಕ್ರವಾರದ ತನಕ ಕೊರೋನಾದಿಂದಾಗಿ 391 ಮಂದಿ ಮೃತಪಟ್ಟಿದ್ದಾರೆ. ಆದರೆ, 17 ಮಂದಿಯನ್ನು ಹೊರತುಪಡಿಸಿ ಇತರರು ಮೂಲ ಕಾಯಿಲೆಯಿಂದಲೇ ಮೃತಪಟ್ಟಿದ್ದಾರೆ. ಮೂಲ ಕಾಯಿಲೆಯಿಂದ ಬಳಲುತ್ತಿದ್ದವರು ಆಸ್ಪತ್ರೆಗೆ ದಾಖಲಾಗಿ ಅಂತಿಮ ಹಂತದಲ್ಲಿ ಅವರಲ್ಲಿ ಕೊರೋನಾ ಸೋಂಕು ದೃಢಪಡುತ್ತಿದೆ. ಇದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿ ತೊಡಕು ಉಂಟಾಗುತ್ತದೆ. ಕೆಲವರಲ್ಲಿ ನ್ಯುಮೋನಿಯಾ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸಾವು ನೋವು ಉಂಟಾಗುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಸಾವನ್ನಪ್ಪುತ್ತಾರೆ ಎಂದು ಹೇಳಲಾಗದು, ಈ ಹಿಂದೆ ಎಷ್ಟೋ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸೋಂಕಿನಿಂದ ಮೃತಪಟ್ಟಿರುವವರ ಮೂಲದ ಕಾರಣದ ಬಗ್ಗೆ ಅಧ್ಯಯನ ಮಾಡಿದ ಸಂದರ್ಭದಲ್ಲಿ ಯಾವ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುವುದು ಕ್ಲಿಷ್ಟಕರ. ಆದರೆ, ಮೂಲ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೋಂಕು ತಗುಲಿದರ ಪರಿಣಾಮದಿಂದಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಸಾವುಗಳು ಸಂಭವಿಸುತ್ತವೆ ಎಂದು ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.