ಬೈಂದೂರು, ಮೇ 04: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷ ದೇಶಕ್ಕೆ ಉತ್ತಮ ಆಡಳಿತ ನೀಡಿದೆ. ಗರಿಷ್ಠ ಸಾಧ್ಯ ಅಭಿವೃದ್ಧಿ ನಡೆಸಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದರೆ ಇಲ್ಲಿಯೂ ಅಂತಹ ಸಾಧನೆ ಸಾಧ್ಯವಾಗುತ್ತದೆ. ಆದುದರಿಂದ ಇಲ್ಲಿನ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಅದರ 150 ಸ್ಥಾನಗಳ ಗೆಲುವಿನ ಗುರಿ ತಲಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದರು. ಅವರು ಮೇ 04 ರ ಶುಕ್ರವಾರ ಬೈಂದೂರು ಬಿಜೆಪಿ ವಲಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಇಲ್ಲಿನ ಕಾನೂನು ಸ್ಥಿತಿ ಹದಗೆಟ್ಟಿದೆ. ಉತ್ತಮ ಅಧಿಕಾರಿಗಳು ಹೊರರಾಜ್ಯಗಳಿಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ ಅಥವಾ ರಾಜೀನಾಮೆ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಭಿವೃದ್ಧಿಗಾಗಿ ಕೇಂದ್ರ ನೀಡಿದ ಅನುದಾನ ದುರ್ಬಳಕೆಯಾಗುತ್ತಿದೆ. ಸ್ಮಾರ್ಟ್ಸಿಟಿಯ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಆದರೂ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಅಧಿಕಾರಕ್ಕೇರಲು ದುರಾಸೆಯಿಂದ ಕನಸು ಕಾಣುತ್ತಿದೆ ಎಂದು ಅವರು ಹೇಳಿದರು.
ನಾಲ್ಕು ವರ್ಷಗಳಲ್ಲಿ ಮೋದಿ ಆಡಳಿತದ ಯಶಸ್ಸಿನ ಪಟ್ಟಿ ಮುಂದಿಟ್ಟ ಅವರು ಬಡವರಿಗೆ ಉಜ್ವಲ್ ಯೋಜನೆ, ಗೃಹ ನಿರ್ಮಾಣ, ಗ್ರಾಮೀಣ ವಿದ್ಯುದೀಕರಣ, ಸ್ವಚ್ಛಭಾರತ ಮಿಷನ್ ಮೂಲಕ ಶೌಚಾಲಯ ನಿರ್ಮಾಣಗಳನ್ನು ಯೋಜನೆಗಳನ್ನು ಹೆಸರಿಸಿದರು. ಕರ್ನಾಟಕದಲ್ಲಿ ರೈಲ್ವೆ ಇಲಾಖೆಯ ಸಾಧನೆಗಳನ್ನು ವಿವರಿಸಿದರು. ನಾಲ್ಕು ವರ್ಷಗಳಲ್ಲಿ 300 ಕಿಮೀ ಹೊಸ ಮಾರ್ಗ ನಿರ್ಮಾಣದ ಜತೆಗೆ 252 ಕಿಮೀ ದ್ವಿಪಥಗೊಳಿಸಲಾಗಿದೆ, 665 ಕಿಮೀ ವಿದ್ಯುತ್ ಮಾರ್ಗವಾಗಿ ಪರಿವರ್ತಿಸಲಾಗಿದೆ. 41 ಮೇಲ್ಸೇತುವೆ ನಿರ್ಮಿಸಲಾಗಿದೆ. ರೈಲ್ವೆಯಲ್ಲಿ ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಭಾರತ್ ಸಂಚಾರ್ ನಿಗಮವನ್ನು ಆಧುನೀಕರಣಗೊಳಿಸಿ, ಖಾಸಗಿ ಕಂಪನಿಗಳ ಜತೆ ಸ್ಪರ್ಧಿಸುವ ಮಟ್ಟಕ್ಕೆ ಅಭಿವೃದ್ಧಿ ಪಡಿಸಲಾಗುವುದು. ಎಲ್ಲ ಗ್ರಾಮಗಳಿಗೂ ಬ್ರಾಡ್ಬ್ಯಾಂಡ್ ಸೇವೆ ಕಲ್ಪಿಸಲಾಗುವುದು. ಜತೆಗೆ ಲಾಭದ ಗುರಿಗಿಂತ ಸಾಮಾಜಿಕ ಹೊಣೆ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸಲಾಗುವುದು ಎಂದರು.
ಬಿಜೆಪಿ ಈಗಾಗಲೇ ದೇಶದ 20 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಕರ್ನಾಟಕದಲ್ಲಿ ಆ ಪ್ರವೃತ್ತಿ ಮುಂದುವರಿಯುವುದು ಖಚಿತ. ಬೈಂದೂರು ಅಭ್ಯರ್ಥಿ ಸುಕುಮಾರ ಶೆಟ್ಟಿ ಸಭ್ಯ ರಾಜಕಾರಣಿಯಾಗಿದ್ದು, ಅವರಿಂದ ಕ್ಷೇತ್ರಕ್ಕೆ ಉತ್ತಮ ಸೇವೆ ದೊರೆಯಲಿದೆ. ಜನ ಈ ಬಾರಿ ಅವರನ್ನು ಬೆಂಬಲಿಸುವುದು ಖಚಿತ ಎಂದು ಆಶಿಸಿದರು.
ದೀಪಕ್ಕುಮಾರ ಶೆಟ್ಟಿ ಸ್ವಾಗತಿಸಿದರು. ಬಿ. ಎಂ. ಸುಕುಮಾರ ಶೆಟ್ಟಿ, ಉಸ್ತುವಾರಿ ಭಾರತಿ ಶೆಟ್ಟಿ, ನವೀನಚಂದ್ರ ಉಪ್ಪುಂದ ಇದ್ದರು.