ಮಂಗಳೂರು, ಮೇ 05: ನರೇಂದ್ರ ದಾಮೋದರ್ ದಾಸ್ ಮೋದಿ ದೇಶದ ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ಕಡಲ ನಗರಿ ಮಂಗಳೂರಿಗೆ ಆಗಮಿಸಿ, ಬಿಜೆಪಿ ಪಕ್ಷದ ಬಹಿರಂಗ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇಂದು ಸಂಜೆ 6.00 ಗಂಟೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಮೈದಾನದಲ್ಲಿ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಸಂಜೆ ಶಿವಮೊಗ್ಗದಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದು ಬಳಿಕ ರಸ್ತೆ ಮಾರ್ಗವಾಗಿ ಕೇಂದ್ರ ಮೈದಾನಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪುರಭವನದ ಹಿಂಭಾಗದ ಫುಟ್ಬಾಲ್ ಮೈದಾನದಲ್ಲಿ 30 ಅಡಿ ಎತ್ತರ ಹಾಗೂ 60 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಇದರಲ್ಲಿ 70 ಮಂದಿಗೆ ಇರಲು ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಭಾಷಣ ಆಲಿಸಲು ಕೇಂದ್ರ ಮೈದಾನದ ಆರು ಕಡೆ ಎಲ್.ಸಿ.ಡಿ ಪರದೆ ಆಳವಡಿಸಲಾಗಿದೆ.
ಮೋದಿ ಆಗಮನದ ಹಿನ್ನೆಲೆ ನಗರದಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಪಕ್ಕದ ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ದ.ಕ ಮತ್ತು ಕೊಡಗು ಜಿಲ್ಲೆಗಳಿಂದ 250 ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.