ಮಂಗಳೂರು, ಸೆ. 05 (DaijiworldNews/MB) : ಕೊರೊನಾ ವೈರಸ್ ಕಾರಣದಿಂದಾಗಿ ಸುಮಾರು ಐದು ತಿಂಗಳ ಕಾಲ ದೇವಾಲಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಕೆಲವು ಸೇವೆಗಳು ಮತ್ತೆ ಪ್ರಾರಂಭ ಮಾಡಲಾಗಿದ್ದು ಈ ಬೆನ್ನಲ್ಲೇ ಈಗ ದೇವಾಲಯಗಳಿಗೆ ಆಗಮಿಸುವ ಭಕ್ತರು ಸಂಖ್ಯೆಯು ಅಧಿಕವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪೊಳಲಿ ಹಾಗೂ ಶರವು ದೇವಾಲಯಗಳಲ್ಲಿ ಸೇವೆಗಳು ಆರಂಭವಾಗಿದೆ. ಸದ್ಯಕ್ಕೆ ಅನ್ನಪ್ರಶಾನ, ಅಕ್ಷರಭ್ಯಾಸದಂತಹ ಸಣ್ಣ ಮಕ್ಕಳು ಉಪಸ್ಥಿತಿರಿರುವ ಸೇವೆಗಳನ್ನು ಆರಂಭ ಮಾಡಿಲ್ಲ.
ಕೂಡಾ ಕರಾವಳಿಯಲ್ಲಿ ಅಧಿಕ ದೇವಾಲಯಗಳಲ್ಲಿ ಮಧ್ಯಾಹ್ನದ ಅನ್ನ ಪ್ರಸಾದದ ವ್ಯವಸ್ಥೆಯಿದ್ದು ಇದೀಗ ಬೇರೆ ಸೇವೆಗಳಿಗೆ ಅವಕಾಶ ನೀಡಿದ್ದರೂ ಅನ್ನಪ್ರಸಾದದ ಸಂದರ್ಭ ಅಧಿಕ ಜನರು ಸೇರುವುದರಿಂದ ಈ ಸೇವೆಗೆ ಅವಕಾಶ ನೀಡಿಲ್ಲ. ಇನ್ನು ಕೆಲವು ದೇವಾಲಯಗಳಲ್ಲಿ ಹಣ್ಣು ಕಾಯಿ ಪ್ರಸಾದ ಅರ್ಪಣೆಯ ಸೇವೆಯೂ ಕೂಡಾ ಆರಂಭವಾಗಿಲ್ಲ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಶುಕ್ರವಾರದವರೆಗೆ ಯಾವುದೇ ಸೇವೆಗಳು ಆರಂಭವಾಗಿಲ್ಲ. ಶೀಘ್ರದಲ್ಲೇ ಸೇವೆಗಳನ್ನು ಆರಂಭ ಮಾಡುವ ವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅನೆಗುಡ್ಡೆ, ಕಮಲಶಿಲೆ ಮತ್ತು ಇತರ ದೇವಾಲಯಗಳಲ್ಲಿ ಈಗ ಕೆಲವು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೆಲವು ದೇವಾಲಯಗಳು ಇನ್ನು ಕೂಡಾ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಹಾಗೂ ಉಡುಪಿ ಶ್ರೀ ಕೃಷ್ಣ ಮಠವು ಕೂಡಾ ಇನ್ನೂ ಸೇವಗಳ ಆರಂಭದ ಬಗ್ಗೆ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ತಿಳಿದುಬಂದಿದೆ.
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಯಕ್ಷಗಾನ ಹಾಗೂ ರಂಗ ಪೂಜೆಯನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ಆರಂಭಿಸಲಾಗಿದೆ. ಕಟೀಲು ದೇವಸ್ಥಾನದಲ್ಲಿ ವಾಹನ ಪೂಜೆ ಮತ್ತು ಇತರ ಸೇವೆಗಳು ಆರಂಭವಾಗಿದೆ.