ಕಾರ್ಕಳ, ಸೆ. 05 (DaijiworldNews/MB) : ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಮೌಲ್ಯಧಾರಿತ ಶಿಕ್ಷಣ ಪ್ರತಿಯೊಬ್ಬರಿಗೆ ದೊರೆತಾಗ ಸಮಾಜ ಸುಧಾರಣೆಗೆ ಬುನಾದಿಯಾಗುತ್ತದೆ. ಅದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ಹೊಸ ಬೆಳವಣಿಗೆಯಿಂದ ಭಾರತ ವಿಕಾಸಗೊಳ್ಳಲಿದೆ ಎಂಬ ಆಶಾಭಾವವನ್ನು ಶಾಸಕ ವಿ.ಸುನೀಲ್ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷನಾಧಿಕಾರಿಗಳ ಕಚೇರಿ ಕಾರ್ಕಳ ಇವುಗಳ ವತಿಯಿಂದ ಶ್ರೀ ಮದ್ಭುವನೇಂದ್ರ ಕಾಲೇಜಿನಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಕೂಡ ಬದಲಾದ ರಾಷ್ಟ್ರೀಯ ಶಿಕ್ಷಣ ಅಧ್ಯಯನ ಮಾಡಿ, ಸಲಹೆ ಸೂಚನೆ ನೀಡಬೇಕು. ಇದರಿಂದ ಮುಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಇದರಿಂದ ಒಳ್ಳೆಯ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಹಲವು ಪ್ರಯತ್ನ ನಡೆಸಿ ಯಶಸ್ವಿಯಾಗಿದೆ. ಶಿಕ್ಷಣಾಧಿಕಾರಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳ ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು. ಈಗಿನ ಪಠ್ಯ ಪುಸ್ತಕದಲ್ಲಿ ಸಿಗದ ಹತ್ತಾರು ವಿಷಯಗಳನ್ನು ಶಿಕ್ಷಕರು ಮಕ್ಕಳಿಗೆ ಹೇಳಿಕೊಡುವ ಮುಖಾಂತರ ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆ ಶಿಕ್ಷಕರಿಗಿದೆ. ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ಮಕ್ಕಳಿಗೆ ಸಿಗುತಿಲ್ಲ ಎನ್ನುವ ಕೊರತೆಯ ಮಧ್ಯೆಯೂ ಶಿಕ್ಷಕರ ಪ್ರಯತ್ನದಿಂದ ಒಳ್ಳೆಯ ಸಮಾಜ ನಿರ್ಮಾಣವಾಗುತ್ತ ಬಂದಿದೆ ಎಂದರು.
ಹೆಬ್ರಿ ತಾ.ಪಂ ಅಧ್ಯಕ್ಷ ರಮೇಶ್ ಪೂಜಾರಿ, ಹೆಬ್ರಿ ಕಾರ್ಕಳ ತಾ.ಪಂ ಉಪಾಧ್ಯಕ್ಷ ಹರೀಶ್ ನಾಯಕ್, ಜಿ.ಪಂ ಸದಸ್ಯರಾದ ಸುಮಿತ್ ಶೆಟ್ಟಿ, ರೇಷ್ಮಾ ಶೆಟ್ಟಿ, ದಿವ್ಯಾಶ್ರೀ ಅಮಿನ್, ಜ್ಯೋತಿ ಪೂಜಾರಿ, ಹೆಬ್ರಿ ತಹಶಿಲ್ದಾರ್ ಮಹೇಶ್ಚಂದ್ರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮೇಜರ್ ಡಾ.ಹರ್ಷ ಉಪಸ್ಥಿತರಿದ್ದರು.
ಪ್ರೌಢ ಮತ್ತು ಪ್ರಾಥಮಿಕ ಶಾಲೆಯ 32 ಮಂದಿ ನಿವೃತ್ತ ಶಿಕ್ಷಕರನ್ನು ಶಾಲು ಹೊದಿಸಿ, ಪುಷ್ಟ, ಪುಸ್ತಕ ನೀಡಿ ಶಾಸಕರು ಗೌರವಿಸಿದರು. ನಿವೃತ್ತ ಶಿಕ್ಷಕರಾದ ಸುಬ್ರಹ್ಮಣ್ಯ ಹಾಗೂ ಶೈಲಾಜ ಹೆಗ್ಡೆ ಸಮ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಪ್ರಸ್ತಾವನೆಗೈದರು. ಕ್ಷೇತ್ರ ಸಮನ್ವಯಧಕಾರಿ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು, ಶಿಕ್ಷಣ ಸಂಯೋಜಕ ಕೃಷ್ಣ ವಂದಿಸಿದರು. ಬಾಲಕೃಷ್ಣ ನಾಯಕ್ ನಿರೂಪಿಸಿದರು