ಹೊಸಂಗಡಿ, ಸೆ 05 (DaijiworldNews/PY): ಹೊಸಂಗಡಿ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಲಾರಿಯಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ 30 ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಜಾನುವಾರುಗಳ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.



ಆರೋಪಿಗಳನ್ನು ಹರಿಯಾಣ ಮೂಲದ ಮಂಜಿತ್ ಸಿಂಗ್ (38) ಪವನ್ ಕುಮಾರ್ (32) ರಾಜಸ್ಥಾನ ಮೂಲದ ಗುಲ್ವಾಂ (29) ಹಾಗೂ ರವಿಕುಮಾರ್ (25) ಎಂದು ಗುರುತಿಸಲಾಗಿದೆ.
ಸೆ. 05ರ ಶನಿವಾರ ಬೆಳಿಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಗೆ ಲಭಿಸಿದ ಖಚಿತ ಮಾಹಿತಿಯಂತೆ ಪಿಎಸ್ಐ ಅನಿಲ್ ಕುಮಾರ್ ಟಿ. ಎನ್ ಸಿಬ್ಬಂದಿಯವರೊಂದಿಗೆ ಹೊಸಂಗಡಿ ಚೆಕ್ ಪೋಸ್ಟ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 9:30 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಲಾರಿಯೊಂದು ಬರುತ್ತಿದ್ದು ಲಾರಿಯನ್ನು ನಿಲ್ಲಿಸಿ ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಟರ್ಪಾಲು ಮುಚ್ಚಿದ ಬಾಡಿಯಲ್ಲಿ ಸುಮಾರು 30 ಜಾನುವಾರುಗಳಿದ್ದು, ಈ ಜಾನುವಾರುಗಳಿಗೆ ಯಾವುದೇ ಮೇವು, ಆಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಮಿಸುಕಾಡದಂತೆ ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಬಂದಿದೆ.
ಆರೋಪಿಗಳು ಕೂಡಾ ವಾಹನದಲ್ಲಿ ಇದ್ದು, ಈ ವೇಳೆ ಆರೋಪಿಗಳಲ್ಲಿ ಜಾನುವಾರುಗಳ ಬಗ್ಗೆ ವಿಚಾರಿಸಿದಾಗ ಜಾನುವಾರುಗಳನ್ನು ಸಾಗಾಟ ಮಾಡುವ ಬಗ್ಗೆ ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಹಾಗೂ ಜಾನುವಾರುಗಳನ್ನು ಆರೋಪಿಗಳು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.
ಘಟನೆಯ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.