ಕುಂದಾಪುರ, ಸೆ23: ಈ ಜೋಡಿ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು. ಇದೀಗ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳನ್ನು ಮಹಿಳಾ ಸಾಂತ್ವನ ಕೇಂದ್ರ ಒಂದಾಗಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಎರಡು ವರುಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಸರಳ ವಿವಾಹ ನೆರವೇರಿಸಿದ್ದಾರೆ. ಸಾಂತ್ವನ ಕೇಂದ್ರದ ಸಂಚಾಲಕಿ ರಾಧಾ ದಾಸ್ ನೇತೃತ್ವದಲ್ಲಿ ನಡೆದ ಮದುವೆಗೆ ಕೇಂದ್ರದ ಕಾರ್ಯಕರ್ತರು ಹಾಗೂ ಅತಿಥಿಗಳು ಸಾಕ್ಷಿಯಾದರು.
ತ್ರಾಸಿಯ ರಾಘವೇಂದ್ರ ಹಾಗೂ ವಸಂತಿ ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ವಠಾರದಲ್ಲಿ ಬೆಳೆದಿದ್ದ ಇವರಿಬ್ಬರು ಪರಸ್ಪರ ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ರಾಘವೇಂದ್ರ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದರೆ, ವಸಂತಿ ಪ್ರಸ್ತುತ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಬೇರೆ ಬೇರೆ ಜಾತಿಯವರಾದರೂ ಜಾತಿಯನ್ನು ಮರೆತು ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮದುವೆಯ ನಿರ್ಧಾರ ತಳೆದಾಗ ಮನೆಯವರಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು.
ಹಾಗಾಗಿ ಯುವತಿ ಮಹಿಳಾ ಸಾಂತ್ವನ ಕೇಂದ್ರದ ಸಹಾಯವಾಣಿಯ ಮೂಲಕ ಸಾಂತ್ವನ ಕೇಂದ್ರದ ಸಂಚಾಲಕಿ ರಾಧಾದಾಸ್ ಅವರನ್ನು ಸಂಪರ್ಕಿಸಿದ್ದರು. ಇಬ್ಬರು ಮನೆಯವರ ವಿರೋಧದ ನಡುವೆ ರಾಧದಾಸ್ ಅವರಿಗೆ ಧೈರ್ಯ ತುಂಬಿದ್ದು, ಕಾನೂನು ಬದ್ಧವಾಗಿ ಸರಳ ರೀತಿಯಲ್ಲಿ ಪ್ರೇಮಿಗಳ ಮದುವೆ ನೆರವೇರಿಸಿದ್ದಾರೆ.
ಸಂತ್ವಾನ ಕೇಂದ್ರದ ಶೃಂಗಾರಿ ಟೀಚರ್, ಮರಿಯಾ ಡಿ ಸೋಜಾ, ಉದ್ಯಮಿಗಳಾದ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ರಾಘವೇಂದ್ರ ಶೇರೆಗಾರ್ ಮೊದಲಾದವರು ಈ ಮದುವೆ ಕಾರ್ಯದಲ್ಲಿ ಉಪಸ್ಥಿತರಿದ್ದರು.