ಮಂಗಳೂರು, ಸೆ 06 (DaijiworldNews/PY): ನಮ್ಮ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ಧ ಅಕ್ಷರಶ: ಸಮರ ಸಾರಿದೆ. ಡ್ರಗ್ಸ್ ಖರೀದಿಸುವವರು, ಮಾರಾಟ ಮಾಡುವವರು, ಪೂರೈಕೆ ಮಾಡುವವರು ನಮ್ಮ ಪಾಲಿಗೆ ಸಮಾಜ ದ್ರೋಹಿಗಳು. ಅವರ ಯುವಜನಾಂಗದ ಭವಿಷ್ಯದ ಹಾದಿಯಲ್ಲಿ ಮುಳ್ಳುಗಳಿದ್ದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಚಳಿನಡುಕ ತಂದಂತೆ, ಅದೇ ಮಾದರಿಯಲ್ಲಿ ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಮಾನ್ಯ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನಮ್ಮ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ಧ ಅಕ್ಷರಶ: ಸಮರ ಸಾರಿದೆ ಎಂದಿದ್ದಾರೆ.
ಡ್ರಗ್ಸ್ ಖರೀದಿಸುವವರು, ಮಾರಾಟ ಮಾಡುವವರು, ಪೂರೈಕೆ ಮಾಡುವವರು ನಮ್ಮ ಪಾಲಿಗೆ ಸಮಾಜ ದ್ರೋಹಿಗಳು. ಅವರ ಯುವಜನಾಂಗದ ಭವಿಷ್ಯದ ಹಾದಿಯಲ್ಲಿ ಮುಳ್ಳುಗಳಿದ್ದಂತೆ. ಆ ಮುಳ್ಳುಗಳನ್ನು ಕೀಳಲು ಪೊಲೀಸ್ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಸ್ವಾತಂತ್ರ್ಯ ನೀಡಿರುವುದು ನಮ್ಮ ಪಕ್ಷ ಲಕ್ಷಾಂತರ ತಾಯಂದಿರ, ಸಹೋದರಿಯರ ಜೊತೆ ಇದೆ ಎನ್ನುವುದೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಇದು ಅಪರಾಧ ಜಗತ್ತಿನ ವಿರುದ್ಧ ನಮ್ಮ ಹೋರಾಟ, ನಮ್ಮ ರಾಜ್ಯದ ಯಾವುದೇ ಊರು, ತಾಲೂಕು, ಜಿಲ್ಲೆಯ ಕಾರ್ಯಕರ್ತರು, ನಾಗರಿಕರು ತಮ್ಮಲ್ಲಿ ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ, ನಿಮಗೆ ಏನೂ ತೊಂದರೆ ಆಗದಂತೆ ಪಕ್ಷ ನೋಡಿಕೊಳ್ಳಲಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಜೊತೆಯಾಗಿ ಎಂದಿದ್ದಾರೆ.