ಕಾಸರಗೋಡು, ಸೆ. 06 (DaijiworldNews/SM): ಬ್ರಹ್ಮೈಕ್ಯರಾದ ಎಡನೀರಿನ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಬೃಂದಾವನಸ್ಥರಾಗಿದ್ದಾರೆ. ಕಾಸರಗೋಡಿನ ಎಡನೀರಿನಲ್ಲಿ ಕೇಶವಾನಂದ ಭಾರತೀ ಶ್ರೀಗಳ ಅಂತ್ಯದ ವಿಧಿವಿಧಾನಗಳು ನಡೆದವು.

ಮಠದ ಉತ್ತರ ಭಾಗದಲ್ಲಿರುವ ಬೃಂದಾವನದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು. ಮಠದ ಈ ಹಿಂದಿನ ಯತಿವರೇಣ್ಯರ ಸಮಾಧಿಗಳ ಪಕ್ಕದಲ್ಲಿ ಶ್ರೀಗಳ ಸಮಾಧಿ ಮಾಡಲಾಯಿತು. ವೇದ ವಿದ್ವಜ್ಜನರು, ತಂತ್ರಿಗಳು ಮತ್ತು ಧಾರ್ಮಿಕ ಪಂಡಿತರು ನೇತೃತ್ವವಹಿಸಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಆಯ್ದ ಭಕ್ತರು ಮತ್ತು ಮಠದ ಆಡಳಿತ ಮಂಡಳಿಯವರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.
ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಶನಿವಾರ ರಾತ್ರಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ವಾಮೀಜಿ ಶನಿವಾರ ತಡ ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಕೆಲದಿನಗಳ ತಮ್ಮ ಚಾತುರ್ಮಾಸ್ಯ ವ್ರತ ಪೂರ್ಣಗೊಳಿಸಿದ್ದರು. ಸುದೀರ್ಘ ಕಾಲ ಚಾತುರ್ಮಾಸ್ಯ ವ್ರತಾನುಷ್ಠಾನಗೈದ ಬೆರಳೆಣಿಕೆಯ ಮಠಾಧಿಪತಿಗಳಲ್ಲಿ ಎಡನೀರು ಸ್ವಾಮೀಜಿ ಕೂಡಾ ಒಬ್ಬರಾಗಿದ್ದಾರೆ.