ಮಂಗಳೂರು, ಮೇ 5: ಪ್ರಧಾನಿ ಮೋದಿ ಸಹಿತ ಬಿಜೆಪಿಯ ಮುಖಂಡರು ದಲಿತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯೆ ಕುಮಾರಿ ಸೆಲ್ಜಾ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರ ಮೇಲೆ, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಆದರೆ ಅದನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ಆಡಳಿತ ಯಂತ್ರ ಇಲ್ಲಿರುವ ದಲಿತರ ವಿರುದ್ಧವಾಗಿ ಕೆಲಸ ನಿರ್ವಹಿಸುತ್ತಿದೆ. ಆರ್.ಎಸ್.ಎಸ್ ತನ್ನ ಅಜೆಂಡಾಗಳನ್ನು ದಲಿತರ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಥುವಾ ಪ್ರಕರಣದಲ್ಲಿ ಸಂತ್ರಸ್ತರಿಗೆ ಬಿಜೆಪಿ ನ್ಯಾಯ ಒದಗಿಸಿಲ್ಲ. ನ್ಯಾಯ ದೊರಕಿಸಿ ಕೊಡಬೇಕಾಗಿದ್ದ ಬಿಜೆಪಿ ಮುಖಂಡರು ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ. ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಬರೀ ಘೋಷಣೆ ಕೂಗುವುದು ಮಾತ್ರ. ಆದರೆ ಅದರಂತೆ ನಡೆದುಕೊಳ್ಳುವುದಿಲ್ಲ ಎಂದು ಟೀಕಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಮೇಲೆ ಗೌರವವಿದೆ ಎಂದು ಮೋದಿ ಹೇಳುತ್ತಾರೆ. ಆದರೆ ಬಿಜೆಪಿಯವರಿಗೆ ದಲಿತರ ಮೇಲೆ ಕಿಂಚಿತ್ತೂ ಗೌರವ ಇಲ್ಲ. ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಹೇಳಿದ್ದಾರೆ.