ಕಾಸರಗೋಡು, ಸೆ. 06(DaijiworldNews/SM): ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ವಿರುದ್ದದ ವಂಚನಾ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಹಸ್ತಾ0ತರಿಸಲಾಗಿದೆ. ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ ಪಿ ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ಚೆಕ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಖಮರುದ್ದೀನ್ ಹಾಗೂ ನಿರ್ದೇಶಕ ಪೂಕೋಯ ತಂಘಳ್ ಗೆ ಪ್ರಥಮ ದರ್ಜೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಫ್ಯಾಷನ್ ಜ್ಯುವೆಲ್ಲರಿಗೆ ಠೇವಣಿ ಇರಿಸಿದ್ದ ಸುಮಾರು 78 ಲಕ್ಷ ರೂ. ಮರಳಿ ಕೇಳಿದಾಗ ನೀಡಿದ ಚೆಕ್ ನಕಲಿಯಾಗಿದ್ದು, ಈ ಬಗ್ಗೆ ಕಳ್ಳಾರ್ ನ ಝುಬೈರ್ ಹಾಗೂ ಅಶ್ರಫ್ ಹೊಸದುರ್ಗ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದರಂತೆ ನ್ಯಾಯಾಲಯ ಸಮನ್ಸ್ ಕಳುಹಿಸಿದೆ.
ಇಬ್ಬರು 98 ಲಕ್ಷ ರೂ. ಠೇವಣಿ ಇರಿಸಿದ್ದು, 20 ಲಕ್ಷ ರೂ. ಈ ಹಿಂದೆ ಮರಳಿ ಪಡೆದಿದ್ದರು. ಆದರೆ ಜ್ಯುವೆಲ್ಲರಿ ಮುಚ್ಚಿದ್ದರಿಂದ ಹಣ ಕೇಳಿದಾಗ ಐದು ಚೆಕ್ ಗಳನ್ನು ಇಬ್ಬರಿಗೆ ನೀಡಲಾಗಿತ್ತು. ಆದರೆ ಅಕೌಂಟ್ ನಲ್ಲಿ ಹಣ ಇಲ್ಲದಿರುವುದರಿಂದ ಈ ಚೆಕ್ ಗಳು ಮರಳಿ ಬಂದಿವೆ ಎಂದು ಠೇವಣಿದಾರರು ದೂರು ನೀಡಿದ್ದರು. ಇದಲ್ಲದೆ ಠೇವಣಿ ವಂಚಿಸಿದ ಬಗ್ಗೆ 12 ದೂರುಗಳು ಚಂದೇರ ಪೊಲೀಸರಿಗೆ ಲಭಿಸಿದೆ. 800ರಷ್ಟು ಮಂದಿಯಿಂದ 132 ಕೋಟಿ ರೂ. ಠೇವಣಿ ಪಡೆಯಲಾಗಿದೆ. ಕ್ರೈಂ ಬ್ರಾಂಚ್ ತನಿಖೆ ಕೈಗೆತ್ತಿಕೊಂಡಿರುವುದರಿಂದ ಇದೀಗ ವಂಚನೆ ಪ್ರಕರಣ ತಿರುವು ಪಡೆದುಕೊಂಡಿದೆ.